ಡೆಹ್ರಾಡೂನ್: ಸಾರ್ವತ್ರಿಕ ಚುನಾವಣೆಯಲ್ಲಿ ಸೋಲು ಅನುಭವಿಸಿದರೂ ಉತ್ತರಾಖಂಡ್ ಸಿಎಂ ಆಗಿ ಮರು ಆಯ್ಕೆ ಆಗಿದ್ದ ಪುಷ್ಕರ್ ಸಿಂಗ್ ಧಾಮಿ, ಚಂಪಾವತ್ ವಿಧಾನಸಭೆ ಉಪ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈ ಉಪ ಚುನಾವಣೆ ಈಗ ಭಾರಿ ಮಹತ್ವ ಪಡೆದುಕೊಂಡಿದ್ದು, ಸಿಎಂ ಸ್ಥಾನ ಉಳಿಸಿಕೊಳ್ಳಬೇಕಾದರೆ ಧಾಮಿ ಎಲೆಕ್ಷನ್ನಲ್ಲಿ ಗೆಲ್ಲಲೇಬೇಕಿದೆ.
ದೇಶಾದ್ಯಂತ ಸಂಚಲನ ಸೃಷ್ಟಿಸಿರುವ ಚುನಾವಣೆ ಗೆಲ್ಲಲು ಬಿಜೆಪಿ ಭಾರಿ ಸನ್ನದ್ಧತೆ ನಡೆಸಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ 40 ಬಿಜೆಪಿ ನಾಯಕರು ಈ ಉಪಚುನಾವಣೆಯಲ್ಲಿ ಪಕ್ಷದ ಪರ ಪ್ರಚಾರ ಮಾಡಲಿದ್ದಾರೆ. ಯೋಗಿ ಆದಿತ್ಯನಾಥ್, ಕೇಂದ್ರ ಸಚಿವರಾದ ಸ್ಮೃತಿ ಇರಾನಿ ಮತ್ತು ಅನುರಾಗ್ ಠಾಕೂರ್, ರಾಜ್ಯಸಭಾ ಸದಸ್ಯರಾದ ಅನಿಲ್ ಬಲುನಿ ಮತ್ತು ನರೇಶ್ ಬನ್ಸಾಲ್, ಮಾಜಿ ಕೇಂದ್ರ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್, ರಾಜ್ಯ ಬಿಜೆಪಿ ಅಧ್ಯಕ್ಷ ಮದನ್ ಕೌಶಿಕ್, ಮಾಜಿ ಮುಖ್ಯಮಂತ್ರಿಗಳಾದ ತ್ರಿವೇಂದ್ರ ಸಿಂಗ್ ರಾವತ್ ಮತ್ತು ತಿರತ್ ಸಿಂಗ್ ರಾವತ್, ಧಾಮಿ ಅವರ ಸಂಪುಟ ಸಹೋದ್ಯೋಗಿಗಳು ಸತ್ಪಾಲ್ ಮಹಾರಾಜ್ , ಧನ್ ಸಿಂಗ್ ರಾವತ್ ಮತ್ತು ರೇಖಾ ಆರ್ಯ ಧಾಮಿ ಪರ ಉಪ ಚುನಾವಣೆಯಲ್ಲಿ ಪ್ರಚಾರ ನಡೆಸಲಿದ್ದಾರೆ.
ಕೈಲಾಶ್ ಚಂದ್ರ ಗೆಹ್ಟೋರಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಚಂಪಾವತ್ ಕ್ಷೇತ್ರಕ್ಕೆ ಮೇ 31 ರಂದು ಉಪಚುನಾವಣೆ ನಡೆಯಲಿದೆ. ಜೂನ್ 2 ರಂದು ಫಲಿತಾಂಶ ಪ್ರಕಟವಾಗಲಿದೆ. ಉತ್ತರಾಖಂಡದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸತತ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದಿದ್ದರೂ. ಈ ವರ್ಷದ ಫೆಬ್ರವರಿಯಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಸಿಎಂ ಧಾಮಿ ತಾವು ಸ್ಪರ್ಧಿಸಿದ್ದ ಖತಿಮಾ ವಿಧಾನಸಭಾ ಕ್ಷೇತ್ರವನ್ನು ಉಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ.
ಇವರ ವಿರುದ್ಧ ಸ್ಪರ್ಧಿಸಿದ್ದ ಕಾಂಗ್ರೆಸ್ನ ಭುವನ್ ಚಂದ್ರ ಕಪ್ರಿ ಧಾಮಿ ವಿರುದ್ಧ ಗೆಲುವು ಸಾಧಿಸಿದ್ದರು. ಈ ಮೂಲಕ ಸಿಎಂ ಪುಷ್ಕರ್ ಸಿಂಗ್ ಧಾಮಿಗೆ ಮುಖಭಂಗವನ್ನುಂಟು ಮಾಡಿದ್ದರು. ಆದರೆ ಸಿಎಂ ಧಾಮಿ ತಾವು ಸೋತರು ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿದ್ದರು. ಈ ಹಿನ್ನೆಲೆಯಲ್ಲಿ ಪಕ್ಷ ಧಾಮಿ ಅವರಿಗೆ ಮತ್ತೊಮ್ಮೆ ಸಿಎಂ ಪಟ್ಟವನ್ನು ಕಟ್ಟಿತ್ತು. ಹೀಗಾಗಿ ಧಾಮಿ ಅವರು ಈ ಉಪ ಚುನಾವಣೆ ಎದುರಿಸುತ್ತಿದ್ದು, ಈ ಸ್ಥಾನ ಗೆಲ್ಲಲೇಬೇಕಿದೆ. ಸೋತರೆ ಸಿಎಂ ಸ್ಥಾನವನ್ನ ತ್ಯಜಿಸಬೇಕಾಗುತ್ತದೆ. ಹೀಗಾಗಿ ಧಾಮಿ ಅವರಿಗೆ ಈ ಉಪ ಚುನಾವಣೆ ಭಾರಿ ಮಹತ್ವದ್ದಾಗಿದೆ.
ಇದನ್ನು ಓದಿ:ಎಸ್‌ಪಿ ದರ್ಜೆ ಅಧಿಕಾರಿಯಿಂದ 'ದೇಶದ್ರೋಹ' ಪ್ರಕರಣಗಳ ಮೇಲ್ವಿಚಾರಣೆ : ಸುಪ್ರೀಂಗೆ ಕೇಂದ್ರ ಮಾಹಿತಿ