ಸಿಲಿಗುರಿ: ಭಾರತದಲ್ಲೇ ಇದ್ದುಕೊಂಡು ಪಾಕಿಸ್ತಾನಕ್ಕೆ ಏಜೆಂಟ್ ಕೆಲಸ ನಿರ್ವಹಿಸುತ್ತಿದ್ದ ಗುಡ್ಡುಕುಮಾರ್ ಎಂಬ ವ್ಯಕ್ತಿಯನ್ನು ಐಎಸ್ ಐ ಏಜೆಂಟ್ ಎಂದು ಶಂಕಿಸಿ ಎಸ್ ಟಿಎಫ್ ಪೊಲೀಸರು ಬುಧವಾರ ಸಿಲಿಗುರಿಯ ವಾರ್ಡ್ ನಂ.24ರ ದೇಬಾಶಿಶ್ ಕಾಲೋನಿಯಲ್ಲಿ ಬಂಧಿಸಿದ್ದಾರೆ.
ಎಸ್ ಟಿಎಫ್ ಪ್ರಕಾರ, ಗುಡ್ಡು ಮೊದಲಿನಿಂದಲೂ ಹೆಣ್ಣು ಮಕ್ಕಳ ಚಟಕ್ಕೆ ಬಿದ್ದಿದ್ದ. ವೃತ್ತಿಯಲ್ಲಿ ಗೃಹ ಶಿಕ್ಷಕ ಮತ್ತು ಬಿಹಾರದ ಚಂಪಾರಣ್ ನಿವಾಸಿ ಗುಡ್ಡು ಕುಮಾರ್ 2010 ರಲ್ಲಿ ಶೋಭಾ ಸಿಂಗ್ ಅವರನ್ನು ವಿವಾಹವಾಗಿದ್ದ. ಈತನಿಗೆ ಓರ್ವ ಪುತ್ರ ಹಾಗೂ ಮೂವರು ಪುತ್ರಿಯರಿದ್ದಾರೆ. ಮದುವೆಯಾದ ನಂತರವೂ ಗುಡ್ಡು ಪೋರ್ನ್ ಸೈಟ್ಗಳಿಗೆ ಭೇಟಿ ನೀಡುತ್ತಿದ್ದನಂತೆ.
ಇದರ ಮೂಲಕ ನಿಷೇಧಿತ ಸೈಟ್‌ಗೆ ಪ್ರವೇಶಿಸಿದ ಈತ ಅಲ್ಲಿ ಪಾಕಿಸ್ತಾನದವರೊಂದಿಗೆ ಮೊಬೈಲ್ ನಂಬರ್ ವಿನಿಮಯ ಮಾಡಿಕೊಳ್ಳುತ್ತಾನೆ. ನಂತರ ಪಾಕಿಸ್ತಾನದ ಐಎಸ್ಐಗೆ ಗುರಿಯಾದ, ಈ ಐಎಸ್ಐ ನವರು ನಾಗರಿಕ ಪುರಾವೆ, ಆಧಾರ್ ಕಾರ್ಡ್ ಮತ್ತು ಮತದಾರರ ಕಾರ್ಡ್ ಸೇರಿದಂತೆ ಎಲ್ಲಾ ವೈಯಕ್ತಿಕ ದಾಖಲೆಗಳನ್ನು ತೆಗೆದುಕೊಂಡು ಗುಡ್ಡುವಿಗೆ ಬ್ಲ್ಯಾಕ್‌ಮೇಲಿಂಗ್ ಮಾಡಲು ಶುರು ಮಾಡಿದರು. ಇದರಿಂದ ಹೆದರಿದ ಗುಡ್ಡು ಐಎಸ್ಐನ ನಿರ್ದೇಶನದಂತೆ ಸೇನಾ ಚಲನವಲನದ ಬಗ್ಗೆ ಮಾಹಿತಿ ನೀಡುತ್ತಿದ್ದ.
ಈ ಭಯದಿಂದ ಈತ ಮನೆಯನ್ನು ಕೂಡ ಬಿಟ್ಟು ಓಡಿಹೋಗಿದ್ದ. ಎರಡು ವರ್ಷಗಳ ಹಿಂದೆ ಸಿಲಿಗುರಿ ತೊರೆಯುವಂತೆ ಹೇಳಿದ್ದ ಐಎಸ್ಐ ಸಿಲಿಗುರಿಯ ಬಳಿಯ ಸುಕ್ನಾ, ಬಂಗ್ಡುಬಿ, ಶಾಲುಗರ, ಬಿನ್ನಬರಿ ಮತ್ತು ಕಾಲಿಂಪಾಂಗ್‌ನ ಸೇನಾ ಶಿಬಿರಗಳಿಂದ ಮಾಹಿತಿ ಕಳುಹಿಸಲು ತಿಳಿಸಿತ್ತು.
ಹಾಗಾಗಿ ಈತ ಸಂಭಾಷಣೆಗಳಿಂದ ಹಿಡಿದು ಮಿಲಿಟರಿ ಶಿಬಿರಗಳ ಚಿತ್ರಗಳು ಅಥವಾ ವಿಡಿಯೋಗಳವರೆಗೆ ಎಲ್ಲವನ್ನೂ ವಾಟ್ಸಾಪ್ ಮೂಲಕ ಕಳುಹಿಸುತ್ತಿದ್ದ. ಅಲ್ಲದೆ, ಗುಡ್ಡುಕುಮಾರ್ ಪ್ರತಿ ಚಿತ್ರಕ್ಕೂ 10,000-12,000 ರೂಪಾಯಿ ಪಡೆಯುತ್ತಿದ್ದ. ತನಿಖಾಧಿಕಾರಿಗಳ ಪ್ರಕಾರ, ಸೇನಾ ಶಿಬಿರದ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಶಾಲುಗಢ ಸೇನಾ ಶಿಬಿರದ ಬಳಿಯ ಸಿಹಿತಿಂಡಿ ಅಂಗಡಿಯೊಂದರ ಕೆಲಸಕ್ಕೆ ಸೇರಬೇಕಿತ್ತಂತೆ.
ಈ ಎಲ್ಲಾ ಅಂಶಗಳು ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗ ಮತ್ತು ಕೇಂದ್ರ ಗುಪ್ತಚರ ಇಲಾಖೆಯ ಮೂವರು ಅಧಿಕಾರಿಗಳು ಶುಕ್ರವಾರ ಮತ್ತು ಶನಿವಾರ ಎಸ್‌ಟಿಎಫ್ ಕಚೇರಿಯಲ್ಲಿ ಅವನನ್ನು ವಿಚಾರಣೆಗೆ ಒಳಪಡಿಸಿದಾಗ ಮಾಹಿತಿ ಹೊರಬಂದಿದೆ.
ಇದೀಗ ಗುಪ್ತಚರ ಇಲಾಖೆ ಆರೋಪಿಯನ್ನು ಬಿಹಾರಕ್ಕೆ ಕರೆದೊಯ್ದು ಹೆಚ್ಚಿನ ತನಿಖೆ ನಡೆಸಲು ಮುಂದಾಗಿದೆ. ಶಂಕಿತ ಐಎಸ್‌ಐ ಏಜೆಂಟ್‌ನ ಬಂಧನದ ನಂತರ, ಮಿಲಿಟರಿ ಇಂಟೆಲಿಜೆನ್ಸ್ ಬ್ಯೂರೋ ತನಿಖೆಯನ್ನು ಪ್ರಾರಂಭಿಸಿದೆ. ಜೊತೆಗೆ ತನಿಖಾಧಿಕಾರಿಗಳು ಈಗ ಗುಡ್ಡುಗೆ ಯಾವ ಮಾಹಿತಿಯನ್ನು ರವಾನಿಸಿದ್ದಾರೆ ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ.
ಇದನ್ನೂ ಓದಿ: ಗ್ರಾಹಕರ ಸೋಗಿನಲ್ಲಿ ಪೊಲೀಸ್ ಕಾರ್ಯಾಚರಣೆ ; 263 ಕೆಜಿ ಗಾಂಜಾ ಜಪ್ತಿ, ಇಬ್ಬರು ಅರೆಸ್ಟ್