ಪುಣೆ (ಮಹಾರಾಷ್ಟ್ರ): ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಕೇಂದ್ರ ಸರ್ಕಾರ ಮಾಡಿದ ಕಾರ್ಯವನ್ನು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆದರ್ ಪೂನವಾಲಾ ಶ್ಲಾಘಿಸಿದ್ದಾರೆ. ಅಲ್ಲದೇ, ಕೋವಿಡ್ ಪ್ರಕರಣಗಳು ಮತ್ತು ಪಾಸಿಟಿವಿಟಿ ದರ ಕುಸಿಯುತ್ತಿರುವ ನಡುವೆ ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ಹಿಮಾಚಲ ಪ್ರದೇಶದಂತಹ ರಾಜ್ಯಗಳಲ್ಲಿ ಕೋವಿಡ್ ನಿರ್ಬಂಧಗಳನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪುಣೆಯಲ್ಲಿ ನಡೆದ ಪರ್ಯಾಯ ಇಂಧನ ಸಮಾವೇಶವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಉದ್ಘಾಟಿಸಿದರು. ನಂತರ ಮಾತನಾಡಿದ ಆದರ್ ಪೂನವಾಲಾ, ಬೂಸ್ಟರ್ ಡೋಸ್‌ಗಾಗಿ ನಾವು ಕೆಲವು ತಿಂಗಳುಗಳಿಂದ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಪ್ರತಿಯೊಬ್ಬ ವ್ಯಕ್ತಿಯೂ ಪ್ರಯಾಣದ ವೇಳೆ ಬೂಸ್ಟರ್ ಡೋಸ್ ತೆಗೆದುಕೊಳ್ಳಬೇಕಾಗುತ್ತದೆ. ಸರ್ಕಾರವು ಈಗಾಗಲೇ ವಯಸ್ಕರಿಗೆ ಎರಡು ಡೋಸ್ ನೀಡಿದೆ. ಈಗ ಬೂಸ್ಟರ್ ನೀಡುವ ಸಮಯ ಬಂದಿದೆ. ಇತರ ಎಲ್ಲಾ ದೇಶಗಳು ಈಗಾಗಲೇ ಬೂಸ್ಟರ್ ಡೋಸ್ ಅನ್ನು ಪ್ರಾರಂಭಿಸಿವೆ. ಈಗ ಭಾರತದ ಸರದಿ ಬಂದಿದೆ ಎಂದರು.
ನಾವು ಸರಿಯಾದ ಲಸಿಕೆಯನ್ನು ಆರಿಸಿರುವುದರಿಂದ ಭಾರತದಲ್ಲಿ ಕೋವಿಡ್ ಪ್ರಕರಣಗಳು ಕಡಿಮೆ ಆಗಿವೆ. ನಾಲ್ಕನೇ ಅಲೆ ಬಂದಾಗ ಅದು ಸೌಮ್ಯವಾಗಿರುತ್ತದೆ. ನಾನು ಯಾವುದೇ ಮುನ್ಸೂಚನೆಗಳನ್ನು ನೀಡಲು ಬಯಸುವುದಿಲ್ಲ. ಆದರೆ, ಈ ಹಿಂದೆ ಕೊರೊನಾ ವೈರಸ್ಗೆ ದೇಶ ಪ್ರತಿಕ್ರಿಯಿಸಿದ ರೀತಿಯನ್ನು ನೋಡಿದರೆ ಲಸಿಕೆಗಳು ಉತ್ತಮವಾಗಿ ಕೆಲಸ ಮಾಡಿವೆ ಎಂಬುದು ಸಾಬೀತಾಗಿದೆ ಎಂದು ತಿಳಿಸಿದ್ದಾರೆ.
ನಂತರ ಮಾತನಾಡಿದ ಅವರು, ನಮ್ಮ ಲಸಿಕೆಗಳು ಕೆಲಸ ಮಾಡುತ್ತವೆ. ಆದರೆ, ಭವಿಷ್ಯದ ರೂಪಾಂತರಿ ವೈರಸ್ಗಾಗಿ ನೀವು ಬೂಸ್ಟರ್ ಅನ್ನು ತೆಗೆದುಕೊಳ್ಳಬೇಕಾಗುತ್ತದೆ. ನಮ್ಮಲ್ಲಿ ಸಾಕಷ್ಟು ಸ್ಟಾಕ್ಗಳಿವೆ ಎಂದು ಅವರು ಹೇಳಿದರು.
ಓದಿ: ಕೋಮಾದಲ್ಲಿದ್ದ ರೋಗಿ ಸಂಗೀತ ಕೇಳಿ ಕೈಯಾಡಿಸಿದ.. ಫಲ ನೀಡಿತು ವೈದ್ಯರು, ದಾದಿಯರ ಹೊಸ ಚಿಕಿತ್ಸೆ!