ನವದೆಹಲಿ: ಅದಾನಿ ಗ್ರೂಪ್ ಮತ್ತು ಹಿಂಡೆನ್‌ಬರ್ಗ್ ವರದಿ ಪ್ರಕರಣದ ತನಿಖೆ ಪೂರ್ಣಗೊಳಿಸಲು ಹೆಚ್ಚುವರಿ ಆರು ತಿಂಗಳು ಬದಲಿಗೆ ಸೆಬಿಗೆ ಮೂರು ತಿಂಗಳ ಕಾಲಾವಕಾಶ ನೀಡುವ ಸುಳಿವನ್ನು ಸುಪ್ರೀಂಕೋರ್ಟ್ ಶುಕ್ರವಾರ ನೀಡಿದೆ. ಇದೇ ವೇಳೆ ಸೆಬಿ ಸಲ್ಲಿಸಿರುವ ಪಿಐಎಲ್‌ಗಳು ಮತ್ತು ಮನವಿಗಳ ಪಟ್ಟಿಗಳ ವಿಚಾರಣೆಯನ್ನು ಮೇ 15ರಂದು ಕೈಗೆತ್ತಿಕೊಳ್ಳಲಾಗುವುದು ಎಂದು ನ್ಯಾಯಪೀಠ ತಿಳಿಸಿದೆ.
ಮುಖ್ಯ ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಪಿಎಸ್ ನರಸಿಂಹ ಮತ್ತು ಜೆಬಿ ಪರ್ದಿವಾಲಾ ಅವರನ್ನು ಒಳಗೊಂಡ ಪೀಠದಲ್ಲಿ ಅದಾನಿ ಗ್ರೂಪ್ ವಿವಾದ ಕುರಿತು ಇಂದು ವಿಚಾರಣೆ ನಡೆದಿದೆ. ಈ ವೇಳೆ, ನ್ಯಾಯ ಪೀಠವು ಅದಾನಿ ಗ್ರೂಪ್ ಮತ್ತು ಹಿಂಡನ್ಬರ್ಗ್ ಪ್ರಕರಣದ ಸಂಬಂಧ ನೇಮಿಸಿದ ನಿವೃತ್ತ ನ್ಯಾಯಮೂರ್ತಿ ಎಎಂ ಸಪ್ರೆ ಸಮಿತಿಯ ವರದಿಯನ್ನು ಸ್ವೀಕರಿಸಲಾಗಿದೆ. ನಾವು ಸಮಿತಿಯ ವರದಿಯನ್ನು ಪರಿಶೀಲಿಸುತ್ತೇವೆ. ಇದರ ಬಳಿಕ ಮೇ 15ರಂದು ಪ್ರಕರಣವನ್ನು ಕೈಗೆತ್ತಿಕೊಳ್ಳುತ್ತೇವೆ ಎಂದು ಹೇಳಿದೆ.
ವಿಚಾರಣೆಯ ಸಂದರ್ಭದಲ್ಲಿ ಸೆಬಿ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಸ್ಟಾಕ್ ಮ್ಯಾನಿಪ್ಯುಲೇಷನ್ ಆರೋಪಗಳ ತನಿಖೆಯನ್ನು ಮುಕ್ತಾಯಗೊಳಿಸಲು ಆರು ತಿಂಗಳ ಬದಲಿಗೆ ಸೆಬಿಗೆ ಹೆಚ್ಚುವರಿ ಮೂರು ತಿಂಗಳ ಕಾಲಾವಕಾಶ ನೀಡಬಹುದು ಎಂದು ಹೇಳಿದರು. ಆಗ ನ್ಯಾಯ ಪೀಠವು ನಾವು ನಿಮಗೆ ಎರಡು ತಿಂಗಳು ನೀಡಿದ್ದೇವೆ. ಅಗತ್ಯವಾದರೆ ಮೂರು ತಿಂಗಳು ನೀಡುತ್ತೇವೆ. ಆರು ತಿಂಗಳು ಆಗಲ್ಲ. ನೀವು ಮೂರು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಿ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ತಿಳಿಸಿತು. ಆದರೆ, ಸಮಿತಿಯ ವರದಿ ಪರಿಶೀಲಿಸಿದ ನಂತರ ಮೇ 15ರ ವಿಚಾರಣೆಯಲ್ಲಿ ಕುರಿತು ಸೆಬಿ ಮನವಿ ಕುರಿತು ಅರ್ಜಿಯ ಆದೇಶವನ್ನು ಪ್ರಕಟಿಸಲಾಗುವುದು ಎಂದು ಹೇಳಿತು.
ಮತ್ತೊಂದೆಡೆ, ಆರೋಪ ಮಾಡುವಾಗ ಎಚ್ಚರದಿಂದಿರಿ. ಇದು ಷೇರುಪೇಟೆಯ ಭಾವನೆಗಳ ಮೇಲೆ ಪರಿಣಾಮ ಬೀರಬಹುದು. ನಿಮ್ಮ ಆರೋಪಗಳು ಮತ್ತು ಅದನ್ನು ಪರಿಶೀಲಿಸಲು ಸಮಿತಿ ರಚಿಸಲಾಗಿದೆ ಎಂದು ಅರ್ಜಿದಾರರಾದ ಜಯಾ ಠಾಕೂರ್ ಪರ ವಾದ ಮಂಡಿಸಿದ ವಕೀಲರಿಗೆ ನ್ಯಾಯ ಪೀಠ ಎಚ್ಚರಿಕೆ ನೀಡಿತು.
ಈ ಹಿಂದೆ ಮಾರ್ಚ್ 2ರಂದು ಅದಾನಿ ಗ್ರೂಪ್ ಕುರಿತ ಹಿಂಡೆನ್‌ಬರ್ಗ್ ವರದಿಯ ಮೊದಲು ಮತ್ತು ನಂತರದ ಯಾವುದೇ ಉಲ್ಲಂಘನೆಗಳ ಬಗ್ಗೆ ಎರಡು ತಿಂಗಳೊಳಗೆ ತನಿಖೆ ಮಾಡುವಂತೆ ಸೆಬಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು. ಇದಾದ ಬಳಿಕ ಏಪ್ರಿಲ್ 29ರಂದು ಸೆಬಿ ಇನ್ನೂ ಆರು ತಿಂಗಳ ಕಾಲಾವಕಾಶ ಕೇಳಿತ್ತು. ಈ ವಿಷಯವು ಗಡಿಯಾಚೆಗಿನ ನ್ಯಾಯ ವ್ಯಾಪ್ತಿಯನ್ನು ಒಳಗೊಂಡಿರುತ್ತದೆ. ಇದು ಪ್ರಕ್ರಿಯೆಗೆ ಸಮಯ ತೆಗೆದುಕೊಳ್ಳುತ್ತದೆ ಎಂದು ಸೆಬಿ ಪರ ವಕೀಲರು ಹೇಳಿದ್ದರು. ಅದಾನಿ ಗ್ರೂಪ್ ವಿರುದ್ಧ ಸ್ಟಾಕ್ ಮ್ಯಾನಿಪ್ಯುಲೇಷನ್ ಆರೋಪಗಳ ಹಿಂಡೆನ್‌ಬರ್ಗ್ ಪ್ರಕಟಿಸಿದ್ದ ವರದಿ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಅಲ್ಲದೇ, ಈ ವರದಿ ನಂತರ ಅದಾನಿ ಗ್ರೂಪ್ ಕಂಪನಿಗಳ ಷೇರುಗಳಲ್ಲಿ ಭಾರಿ ಕುಸಿತ ಕಂಡು ಬಂದಿತ್ತು.
ಇದನ್ನೂ ಓದಿ: ಹನಿಟ್ರ್ಯಾಪ್ ಬಲೆಗೆ ಬಿದ್ದು ಪಾಕ್ಗೆ ಗೌಪ್ಯ ಮಾಹಿತಿ ಹಂಚಿಕೆ ಆರೋಪ: ವಿಜ್ಞಾನಿ ಕುರುಲ್ಕರ್ ಬಗ್ಗೆ ಹೊಸ ಮಾಹಿತಿ ಬಹಿರಂಗ