ಕೊಚ್ಚಿ, ಕೇರಳ: ಸಿನಿಮಾ ನಟಿ ಆಯೇಷಾ ಸುಲ್ತಾನ ಶನಿವಾರ ಲಕ್ಷದ್ವೀಪಕ್ಕೆ ತೆರಳಿದ್ದು, ಕವರಟ್ಟಿ ಪೊಲೀಸರ ಸಮನ್ಸ್ ಹಿನ್ನೆಲೆಯಲ್ಲಿ ವಿಚಾರಣೆಗೆ ಪೊಲೀಸರ ಮುಂದೆ ಹಾಜರಾಗಲಿದ್ದಾರೆ. ಟಿವಿಯೊಂದರ ಸಂದರ್ಶನದಲ್ಲಿ ಅವರು ನೀಡಿದ್ದ ಹೇಳಿಕೆ ಕಾರಣಕ್ಕೆ ಆಯೇಷಾ ವಿರುದ್ಧ ದೂರು ದಾಖಲಾಗಿತ್ತು.
ಲಕ್ಷದ್ವೀಪದಲ್ಲಿ ಕೋವಿಡ್ ಹರಡಲು ಕೇಂದ್ರವು ಜೈವಿಕ ಶಸ್ತ್ರಾಸ್ತ್ರಗಳನ್ನು ಬಳಸಿದೆ ಎಂಬ ಆರೋಪವನ್ನು ಆಯೇಷಾ ಜೂನ್ 7ರಂದು ನಡೆದ ಸಂದರ್ಶನವೊಂದರಲ್ಲಿ ಹೇಳಿದ್ದರು. ಈ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಲಕ್ಷದ್ವೀಪ ಬಿಜೆಪಿ ಘಟಕದ ಅಧ್ಯಕ್ಷ ಅಬ್ದುಲ್ ಖಾದರ್ ದೂರು ದಾಖಲಿಸಿದ್ದರು.
ನಟಿ ಆಯೇಷಾ ಸುಲ್ತಾನ ದೇಶದ್ರೋಹದ ಹೇಳಿಕೆ ನೀಡಿದ್ದಾರೆಂದು ಅಬ್ದುಲ್ ಖಾದರ್ ಆರೋಪಿಸಿದ್ದು, ಕವರತ್ತಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇದಾದ ನಂತರ ಆಯೇಷಾಗೆ ಭಾನುವಾರ ಸಂಜೆಯೊಳಗೆ ಪೊಲೀಸರ ಮುಂದೆ ಹಾಜರಾಗಲು ಸಮನ್ಸ್ ನೀಡಲಾಗಿತ್ತು.
ಇದನ್ನೂ ಓದಿ: ಪ್ರವಾಹ ನಿರ್ವಹಣೆಗಾಗಿ ಸಮನ್ವಯತೆ ಸಾಧಿಸಲು ಉಭಯ ರಾಜ್ಯಗಳು ತೀರ್ಮಾನ: ಸಿಎಂ
ಈ ಹಿನ್ನೆಲೆಯಲ್ಲಿ ಕೇರಳದ ಕೊಚ್ಚಿಯಲ್ಲಿದ್ದ ಆಯೇಷಾ, ಲಕ್ಷದ್ವೀಪದ ರಾಜಧಾನಿ ಕವರತ್ತಿಗೆ ತೆರಳಿ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ. ಇದಕ್ಕೂ ಮುನ್ನ ಪ್ರತಿಕ್ರಿಯೆ ನೀಡಿರುವ ಅವರು, ನಾನು ಯಾವುದೇ ತಪ್ಪು ಮಾಡಿಲ್ಲ. ಪೊಲೀಸರ ಮುಂದೆ ನಾಳೆ ಹಾಜರಾಗುತ್ತೇನೆ ಎಂದು ಮಾಹಿತಿ ನೀಡಿದ್ದಾರೆ.