ನವದೆಹಲಿ: ರಾಮಾಯಣ ಧಾರಾವಾಹಿಯಲ್ಲಿ ರಾಮನ ಪಾತ್ರಧಾರಿಯಾಗಿ ಮನೋಜ್ಞ ಅಭಿನಯದ ಮೂಲಕ ಖ್ಯಾತಿಗಳಿಸಿದ್ದ ಅರುಣ್ ಗೋವಿಲ್ ಭಾರತೀಯ ಜನತಾ ಪಾರ್ಟಿ ಸೇರಿಕೊಂಡರು. ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಾಗಿದೆ.
ರಾಮಾಯಣ ಪೌರಾಣಿಕ ಕಥಾಭಾಗದಲ್ಲಿ ಇವರ ನಟನಾ ಶೈಲಿಗೆ ಫಿದಾ ಆಗಿದ್ದ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದರು. ಇದೀಗ ಇವರು ಕಮಲ ಮುಡಿದಿದ್ದಾರೆ. ಆದರೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರಾ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ.
ರಾಮಾಯಣದ ಹೊರತಾಗಿ 63 ವರ್ಷದ ಗೋವಿಲ್, ಹಿಂದಿ, ಭೋಜ್ಪುರಿ, ಒಡಿಯಾ ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ. ಹಲವು ಚಿತ್ರಗಳಲ್ಲಿ ಪೋಷಕ ನಟರಾಗಿಯೂ ಕಾಣಿಸಿಕೊಂಡಿದ್ದಾರೆ. ಆದರೆ ರಾಮಾಯಣದಲ್ಲಿನ ರಾಮನ ಪಾತ್ರ ಇವರಿಗೆ ವ್ಯಾಪಕ ಜನಮೆಚ್ಚುಗೆ ತಂದುಕೊಟ್ಟಿದೆ.
1987ರಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ರಾಮಾಯಣವನ್ನು ರಮಾನಂದ ಸಾಗರ್ ಬರೆದು, ನಿರ್ಮಾಣ ಮಾಡಿದ್ದರು. ಇದರಲ್ಲಿ ದೀಪಿಕಾ ಚಿಖಾಲಿಯಾ ಮತ್ತು ಸುನೀಲ್ ಲಹ್ರಿ ಕ್ರಮವಾಗಿ ಸೀತಾ ಮತ್ತು ಲಕ್ಷ್ಮಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ದೇಶದಲ್ಲಿ ಮಾಹಾಮಾರಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿದ್ದ ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಮರುಪ್ರಸಾರ ಮಾಡಲಾಗಿತ್ತು.