ಚೆಬ್ರೋಲು (ಆಂಧ್ರಪ್ರದೇಶ): ಜೂನ್ 26ರಂದು ಲಂಡನ್‌ನಲ್ಲಿ ಅಪಘಾತಕ್ಕೊಳಗಾಗಿದ್ದ ಆಂಧ್ರಪ್ರದೇಶದ 25 ವರ್ಷದ ಯುವಕ ಕಿರಣ್ ಕುಮಾರ್ ಸಾವನ್ನಪ್ಪಿದ್ದಾರೆ. ಗುಂಟೂರು ಜಿಲ್ಲೆಯ ಚೆಬ್ರೋಲು ಮಂಡಲದ ಗೋದಾವರ್ರು ಗ್ರಾಮದ ನಿವಾಸಿ ಕಿರಣ್ ಕುಮಾರ್ ಏಲೂರಿನಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿ ತನ್ನ ಉನ್ನತ ಶಿಕ್ಷಣ ಎಂಎಸ್‌ಗಾಗಿ ಇಂಗ್ಲೆಂಡ್ನ ಲಂಡನ್‌ನಲ್ಲಿ ನೆಲೆಸಿದ್ದರು.
ಉನ್ನತ ಶಿಕ್ಷಣದ ಬಳಿಕ ಯುಕೆಯಲ್ಲಿ ಉದ್ಯೋಗ ಪಡೆಯಲು ತಜ್ಞರ ಸಲಹೆ ಮೇರೆಗೆ ಕೆಲವು ಕೋರ್ಸ್ಗಳಿಗಾಗಿ ಟ್ಯೂಷನ್ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು. ಹೀಗೆ ಜೂನ್ 26ರಂದು ಕುಮಾರ್ ದ್ವಿಚಕ್ರ ವಾಹನದಲ್ಲಿ ತರಗತಿಗೆ ಹಾಜರಾಗಲು ಹೋಗುತ್ತಿದ್ದರು. ಇದೇ ಸಮಯದಲ್ಲಿ ಪೊಲೀಸರು ದರೋಡೆಕೋರನನ್ನು ಹಿಂಬಾಲಿಸುತ್ತಿದ್ದರು. ಇದರಿಂದ ಅತಿವೇಗದಲ್ಲಿ ಬಂದ ಆರೋಪಿಯ ವಾಹನ ಕಿರಣ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಕಿರಣ್ ಕುಮಾರ್ ಅಸುನೀಗಿದ್ದಾರೆ.
ಮೃತಪಟ್ಟ ಮಗನ ಮೃತದೇಹವನ್ನು ಭಾರತಕ್ಕೆ ತರಿಸಿಕೊಳ್ಳಲು ಅನಿವಾಸಿ ಭಾರತೀಯರ ನೆರವು ಪಡೆದಿದ್ದು, ಲಂಡನ್ನಿಂದ ಸ್ವಗ್ರಾಮಕ್ಕೆ ಪಾರ್ಥಿವ ಶರೀರ ಆಗಮಿಸುತ್ತಿದೆ. ಕಿರಣ್ ಕುಮಾರ್ ಪೋಷಕರು ದೇವರೂರು ಗ್ರಾಮದ ಆರಾಧ್ಯುಲ ಯಜ್ಞನಾರಾಯಣ ಮತ್ತು ಭೂಲಕ್ಷ್ಮಿ. ಯುವಕನಿಗೆ ಹಿರಿಯ ಸಹೋದರ ಸುಧೀರ್ ಕುಮಾರ್ ಎಂಬವರಿದ್ದು ಅಂಚೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳಿ ಕೆಲವೇ ದಿನಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳುವ ತವಕದಲ್ಲಿದ್ದ ಮಗ ಸಾವಿಗೀಡಾಗಿದ್ದು ಪೋಷಕರಲ್ಲಿ ದುಃಖ ಮಡುಗಟ್ಟಿದೆ.
ವ್ಯಾಸಂಗಕ್ಕೆ ತೆರಳಿದ್ದ ಹೈದರಾಬಾದ್ ಯುವತಿ ಕೊಲೆ: ಜೂನ್ ತಿಂಗಳಿನಲ್ಲಿ ಉನ್ನತ ವ್ಯಾಸಂಗಕ್ಕಾಗಿ ಲಂಡನ್‌ಗೆ ತೆರಳಿದ್ದ ತೆಲುಗು ನಾಡಿನ ಯುವತಿ ಮೇಲೆ ವಿದೇಶಿ ಯುವಕನೊಬ್ಬ ಚಾಕುವಿನಿಂದ ಹಲ್ಲೆ ನಡೆಸಿರುವ ಘಟನೆ ನಡೆದಿತ್ತು. ಘಟನೆಯಲ್ಲಿ ಯುವತಿ ಸಾವನ್ನಪ್ಪಿದ್ದು, ಆಕೆಯನ್ನು ಕಾಪಾಡಲೆಂದು ಮುಂದೆ ಹೋದ ಆಕೆಯ ಸ್ನೇಹಿತೆ ಗಂಭೀರವಾಗಿ ಗಾಯಗೊಂಡಿದ್ದರು.
ಮೃತಪಟ್ಟ ತೇಜಸ್ವಿನಿ ಲಂಡನ್‌ನಲ್ಲಿ ತನ್ನ ಸ್ನೇಹಿತರೊಂದಿಗೆ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದರು. ಫ್ಲ್ಯಾಟ್ನಲ್ಲಿ ಹುಡುಗಿಯರು ಮತ್ತು ಹುಡುಗರು ಒಟ್ಟಿಗೆ ವಾಸಿಸುತ್ತಿದ್ದರು. ಅವರ ಫ್ಲಾಟ್‌ಮೇಟ್‌ಗಳಲ್ಲಿ ಬ್ರೆಜಿಲ್‌ನ ಯುವಕನೂ ಇದ್ದ. ಇಷ್ಟು ವರ್ಷಗಳ ಕಾಲ ಎಲ್ಲರೂ ಒಟ್ಟಿಗೆ ಇದ್ದರು. ಜೊತೆಗೆ ಎಲ್ಲವೂ ಚೆನ್ನಾಗಿಯೇ ಇತ್ತು. ಇದ್ದಕ್ಕಿದ್ದಂತೆ ತೇಜಸ್ವಿನಿ ಮೇಲೆ ಬ್ರೆಜಿಲ್ ಯುವಕ ಚಾಕುವಿನಿಂದ ಹಲ್ಲೆ ನಡೆಸಿದ್ದ. ದಾಳಿಯಲ್ಲಿ ತೇಜಸ್ವಿನಿ ಸಾವನ್ನಪ್ಪಿದ್ದರು. ಆಕೆಯನ್ನು ಕಾಪಾಡಲೆಂದು ಮುಂದಾದ ಆಕೆಯ ಸ್ನೇಹಿತೆಯ ಮೇಲೂ ಹಲ್ಲೆ ನಡೆಸಿದ್ದು, ಆಕೆ ಕೂಡ ಗಂಭೀರವಾಗಿ ಗಾಯಗೊಂಡಿದ್ದರು. ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆ ಅಲ್ಲಿನ ಪೊಲೀಸರು ಸ್ಥಳಕ್ಕಾಗಮಿಸಿದ್ದು, ಬ್ರೆಜಿಲ್ ಯುವಕನನ್ನು ಬಂಧಿಸಿದ್ದರು.
ಇದನ್ನೂ ಓದಿ: ಪ್ರತ್ಯೇಕ ರೇಪ್ ಕೇಸ್: ಲಂಡನ್‌ನಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಗೆ 6 ವರ್ಷ ಜೈಲು, 50 ವರ್ಷದ ವ್ಯಕ್ತಿಗೆ 18 ವರ್ಷ ಸೆರೆವಾಸ