ವಿಜಯನಗರಂ(ಆಂಧ್ರಪ್ರದೇಶ) : ಒಂದು ಹೊತ್ತಿನ ಊಟ ಇಲ್ಲವೆಂದರೆ ಸಾಕು ನಮ್ಮ ಮನಸು ಬೇರೆ ಏನೆಲ್ಲ ವಿಚಾರ ಮಾಡಲು ಶುರು ಮಾಡಿ ಬಿಡುತ್ತದೆ. ಆದರೆ, ಇಲ್ಲೋರ್ವ ವೃದ್ಧೆ ಕಳೆದ 60 ವರ್ಷಗಳಿಂದ ಕಾಡಿನಲ್ಲಿ ವಾಸ ಮಾಡ್ತಾ ಹೊಟ್ಟೆಗಾಗಿ ಕೇವಲ 'ಕರ್ಪೂರ' ತಿಂದು ಜೀವನ ಸಾಗಿಸುತ್ತಿದ್ದಾರೆ.
75 ವರ್ಷದ ಪದ್ಮಾವತಿ ದೇವಿ ಕಳೆದ 60 ವರ್ಷಗಳಿಂದ ಕಾಡಿನಲ್ಲಿ ಏಕಾಂಗಿಯಾಗಿ ವಾಸ ಮಾಡ್ತಿದ್ದಾರೆ. ಕರ್ಪೂರ, ದೂಪದ್ರವ್ಯದ ಹೊಗೆ ಹಾಗೂ ದಿನಕ್ಕೆ ಮೂರು ಸಲ ಚಹಾ ಕುಡಿದು ಜೀವನ ನಡೆಸುತ್ತಿದ್ದಾರೆ. ಇದು ನಂಬಲಸಾಧ್ಯವೆನಿಸಿದರೂ ನಿಜ. ಕಳೆದ 60 ವರ್ಷಗಳಿಂದ ಅವರ ಆರೋಗ್ಯದಲ್ಲಿ ಯಾವುದೇ ರೀತಿಯ ಸಮಸ್ಯೆ ಕಾಣಿಸಿಲ್ವಂತೆ
ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ದತ್ತಿರಾಜೇರು ಮಂಡಲದ ಪೆಡಕಡ ಗ್ರಾಮದ ಮಹಿಳೆ ಪದ್ಮಾವತಿ ಈ ರೀತಿಯ ಜೀವನ ನಡೆಸುತ್ತಿದ್ದಾರೆ. ಕೇವಲ 16ನೇ ವಯಸ್ಸಿನಲ್ಲೇ ತನ್ನ ಕುಟುಂಬ ಬಿಟ್ಟು ಹೋಗಿರುವ ಇವರು, ಹಳ್ಳಿಯ ಪಕ್ಕದಲ್ಲಿರುವ ಮರುಪಲ್ಲಿಕೊಂಡದಲ್ಲಿನ ಕಾಡಿನಲ್ಲಿ ಗುಡಿಸಲು ಕಟ್ಟಿಕೊಂಡು ಜೀವನ ನಡೆಸಲು ಆರಂಭಿಸಿದ್ದಾರೆ.
ಈ ವೇಳೆ ಮನೆಯವರು ಮರಳಿ ಬರುವಂತೆ ಕರೆದಿದ್ದಾರೆ. ಆದರೆ, ಇದಕ್ಕೆ ನಿರಾಕರಣೆ ಮಾಡಿ, ಅಲ್ಲೇ ವಾಸ ಮಾಡಲು ಶುರು ಮಾಡಿದ್ದಾರೆ. ಕಾಡು ಪ್ರಾಣಿಗಳು, ಹಾವುಗಳಿಂದ ಹೆದರಿ ಜನರು ಈ ಪ್ರದೇಶಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದರು. ಆದರೆ, ಪದ್ಮಾವತಿ ಮಾತ್ರ ಯಾವುದೇ ಭಯವಿಲ್ಲದೇ ಇಲ್ಲಿ ಜೀವನ ನಡೆಸಲು ಆರಂಭಿಸಿದ್ದಾರೆ.
ಇದಾದ 20 ವರ್ಷದ ನಂತರ ಗ್ರಾಮಸ್ಥರೆಲ್ಲರೂ ಸೇರಿ ಬೆಟ್ಟದ ತುದಿಯಲ್ಲಿ ವೆಂಕಟೇಶ್ವರ ದೇವಸ್ಥಾನ ನಿರ್ಮಾಣ ಮಾಡಿದ್ದಾರೆ. ವಿದ್ಯುತ್ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಸಹ ಮಾಡಿಸಿದ್ದಾರೆ. ವೆಂಕಟೇಶ್ವರನ ಪರಮ ಭಕ್ತೆಯಾಗಿರುವ ಪದ್ಮಾವತಿ ಈ ಜಾಗದಲ್ಲಿ ವಾಸ ಮಾಡಲು ಶುರು ಮಾಡಿದ್ದಾರೆ. ಪ್ರತಿ ಸೋಮವಾರ ಮತ್ತು ಶನಿವಾರ ಭಕ್ತರು ಇಲ್ಲಿಗೆ ಆಗಮಿಸಲು ಆರಂಭಿಸಿದ್ದಾರೆ.
ಈ ವೇಳೆ ಹಾಲು, ಹಣ್ಣು ಮತ್ತು ಉಡುಗೊರೆ ನೀಡಲು ಮುಂದಾಗಿದ್ದಾರೆ. ಆದರೆ, ಪದ್ಮಾವತಿ ಅವರು ಯಾವುದನ್ನೂ ಸ್ವೀಕಾರ ಮಾಡಿಲ್ಲ. ಕೇವಲ ಕರ್ಪೂರ ಸೇವನೆ ಮಾಡುವುದು, ದಿನಕ್ಕೆ ಮೂರು ಸಲ ಚಹಾ ಕುಡಿದು ಜೀವನ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ನನಗೆ ಹಸಿವು ಆಗುವುದಿಲ್ಲ ಎಂದಿರುವ ಪದ್ಮಾವತಿ ಅವರಿಗೆ ಈವರೆಗೆ ಆರೋಗ್ಯ ಸಮಸ್ಯೆ ಕಂಡು ಬಂದಿಲ್ಲವಂತೆ.