ನವದೆಹಲಿ: 2024ರಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ (ನರೇಗಾ) ವೇತನ ಪಾವತಿಗೆ ಆಧಾರ್ ಆಧಾರಿತ ಪಾವತಿ ವ್ಯವಸ್ಥೆಯನ್ನು (ಎಬಿಪಿಎಸ್) ಕಡ್ಡಾಯಗೊಳಿಸಲಾಗಿದೆ. ಈ ವ್ಯವಸ್ಥೆಗೆ "ತಾಂತ್ರಿಕ ಸಮಸ್ಯೆ" ಹೊಂದಿರುವ ಕೆಲವು ಗ್ರಾಮ ಪಂಚಾಯತ್‌ಗಳಿಗೆ ಸರ್ಕಾರ ವಿನಾಯಿತಿ ನೀಡುತ್ತದೆ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ಸೋಮವಾರ ಮಾಹಿತಿ ನೀಡಿದೆ.
"ನರೇಗಾ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಪಾವತಿಯನ್ನು ಖಚಿತಪಡಿಸಿಕೊಳ್ಳಲು, ಎಬಿಪಿಎಸ್ ವ್ಯವಸ್ಥೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಫಲಾನುಭವಿಗಳು ಆಗಾಗ್ಗೆ ತಮ್ಮ ಬ್ಯಾಂಕ್ ಖಾತೆಯನ್ನು ಬದಲಾಯಿಸುವ ಸಂದರ್ಭದಲ್ಲಿ ಇದು ಸಹಕಾರಿಯಾಗಲಿದೆ. ಗ್ರಾಮ ಪಂಚಾಯತ್ಗಳು ತಾಂತ್ರಿಕ/ ಆಧಾರ್ ಸಂಬಂಧಿತ ಸಮಸ್ಯೆ ಹೊಂದಿದ್ದರೆ, ಅದನ್ನು ಪರಿಹರಿಸುವವರೆಗೆ ಎಬಿಪಿಎಸ್‌ನಿಂದ ವಿನಾಯಿತಿ ಪಡೆಯಬಹುದು" ಹೇಳಿಕೆಯಲ್ಲಿ ತಿಳಿಸಲಾಗಿದೆ.
ರಾಷ್ಟ್ರೀಯ ಮೊಬೈಲ್ ಮಾನಿಟರಿಂಗ್ ಸಿಸ್ಟಮ್ (ಎನ್‌ಎಂಎಂಎಸ್) ಅಪ್ಲಿಕೇಶನ್‌ನ ಸಹಾಯದಿಂದ ಸ್ಥಳದಲ್ಲಿ ಕೆಲಸ ಮಾಡುವ ಫಲಾನುಭವಿಗಳ ಹಾಜರಾತಿಯ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಇದರಿಂದ ಫಲಾನುಭವಿಯ ಕೆಲಸದ ಬಗ್ಗೆ ಯಾವುದೇ ಮೋಸ ಇರುವುದಿಲ್ಲ. ದಾಖಲೆಗಳನ್ನು ನಾಗರಿಕರೇ ಪರಿಶೀಲಿಸಬಹುದಾಗಿದೆ.
ರಿಮೋಟ್ ಸೆನ್ಸಿಂಗ್ ತಂತ್ರಜ್ಞಾನ ಬಳಸಿಕೊಂಡು ಜಿಯೋಟ್ಯಾಗ್ ಮಾಡುವುದರಿಂದ ಸಾರ್ವಜನಿಕ ಆಸ್ತಿಗಳ ಲಭ್ಯತೆಯನ್ನೂ ಖಾತ್ರಿಪಡಿಸಲಾಗುತ್ತದೆ. ಫಲಾನುಭವಿಗಳ ಖಾತೆಗೆ ನೇರ ವೇತನ ಪಾವತಿಯನ್ನು ಒದಗಿಸಲು ರಾಷ್ಟ್ರೀಯ ಎಲೆಕ್ಟ್ರಾನಿಕ್ ಫಂಡ್ ಮ್ಯಾನೇಜ್ಮೆಂಟ್ ಸಿಸ್ಟಮ್ ಅನ್ನು 2016-17ರಲ್ಲಿ ಪ್ರಾರಂಭಿಸಲಾಗಿದೆ. ಪ್ರಸ್ತುತ, ಶೇ.99ಕ್ಕಿಂತ ಹೆಚ್ಚು ವೇತನ ಪಾವತಿಯನ್ನು ಫಲಾನುಭವಿಗಳ ಬ್ಯಾಂಕ್/ಪೋಸ್ಟ್ ಆಫೀಸ್ ಖಾತೆಗಳಿಗೆ ನೇರವಾಗಿ ವರ್ಗಾಯಿಸಲಾಗುತ್ತಿದೆ.
ನರೇಗಾ ಫಲಾನುಭವಿಗಳ ಜಾಬ್ ಕಾರ್ಡ್ ಮತ್ತು ಆಧಾರ್ ಲಿಂಕ್ ಮಾಡುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿರುತ್ತದೆ. ಇದರಿಂದ ನೈಜ ಫಲಾನುಭವಿಗಳು ಲಾಭ ಪಡೆಯಲು ಸಾಧ್ಯವಾಗುತ್ತಿದೆ. ಈಗಾಗಲೇ ಸಚಿವಾಲಯವು ಒಟ್ಟು 14.32 ಕೋಟಿ ಸಕ್ರಿಯ ಕಾರ್ಮಿಕರಲ್ಲಿ 14.08 ಕೋಟಿ (ಶೇ. 98.31) ಮಂದಿಗೆ ಆಧಾರ್ ಸೀಡಿಂಗ್ ಮಾಡಿದೆ. ಒಟ್ಟು 13.76 ಕೋಟಿ ಆಧಾರ್ ಕಾರ್ಡ್‌ಗಳನ್ನು ದೃಢೀಕರಿಸಲಾಗಿದೆ. ಶೇ.87.52ರಷ್ಟು ಸಕ್ರಿಯ ಕಾರ್ಮಿಕರು ಎಬಿಪಿಎಸ್‌ಗೆ ಅರ್ಹರಾಗಿದ್ದಾರೆ. ಒಟ್ಟು ನೋಂದಾಯಿತ ಜಾಬ್ ಕಾರ್ಡ್‌ಗಳು 14.32 ಕೋಟಿಯಾಗಿದ್ದರೆ, ಕೇವಲ 9.77 ಕೋಟಿ (ಶೇ.68.22) ಜಾಬ್ ಕಾರ್ಡ್‌ಗಳು ಸಕ್ರಿಯವಾಗಿವೆ ಎಂದು ಸಚಿವಾಲಯ ಅಂಕಿಅಂಶ ನೀಡಿದೆ.
ಆಧಾರ್ ಲಿಂಕ್ ಮಾಡುವುದರಿಂದ ಜಾಬ್ ಕಾರ್ಡ್ ಡಿಲೀಟ್: ಆಧಾರ್ ಲಿಂಕ್ ಮಾಡುವುದರಿಂದ ಜಾಬ್ ಕಾರ್ಡ್ ಡಿಲೀಟ್ ಆಗಬಹುದು ಎಂಬುದು ಆರೋಪವನ್ನು ಸರ್ಕಾರ ನಿರಾಕರಿಸಿದೆ. ಮನೆಯವರ ಜಾಬ್ ಕಾರ್ಡ್ ಅನ್ನು ನಿರ್ದಿಷ್ಟ ನಿಯಮದ ಅಡಿ ಮಾತ್ರ ಅಳಿಸಬಹುದು. ಆದರೆ ಎಬಿಪಿಎಸ್‌ನಿಂದ ಅಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಎಂಜಿಎನ್‌ಆರ್‌ಇಜಿಎಸ್) ಅಡಿಯಲ್ಲಿ ಆಧಾರ್ ಆಧಾರಿತ ಪಾವತಿ ವ್ಯವಸ್ಥೆಯ ಮೂಲಕ ಕಾರ್ಮಿಕರಿಗೆ ಕಡ್ಡಾಯ ವೇತನದ ಗಡುವನ್ನು 2023ರ ಡಿಸೆಂಬರ್ 31ರವರೆಗೆ ವಿಸ್ತರಿಸಲಾಗಿತ್ತು. ಜನವರಿ 1ರಿಂದ ಎಬಿಪಿಎಸ್ ಮುಖಾಂತರವೇ ವೇತನ ವ್ಯವಸ್ಥೆ ಮಾಡಲಾಗುತ್ತದೆ.
ಇದನ್ನೂ ಓದಿ: 'ಯುವನಿಧಿ'ಗೆ 7 ದಿನದಲ್ಲಿ 19,800 ಅರ್ಜಿ: ಯಾವ ಜಿಲ್ಲೆಯಲ್ಲಿ ಎಷ್ಟು ನೋಂದಣಿ?