ಇಂಫಾಲ : ಮಣಿಪುರದಲ್ಲಿ ಮೇ 3ರಿಂದ ಶುರುವಾದ ಎರಡು ಬುಡಕಟ್ಟು ಸಮುದಾಯಗಳ ನಡುವಿನ ಹಿಂಸಾಚಾರ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಬಿಷ್ಣುಪುರ್ ಜಿಲ್ಲೆಯ ಗಡಿಯಲ್ಲಿರುವ ಚುರಾಚಂದ್‌ಪುರ ಜಿಲ್ಲೆಯ ತೊರ್ಬಂಗ್ ಬಜಾರ್ ಪ್ರದೇಶದಲ್ಲಿ ಶಸ್ತ್ರಸಜ್ಜಿತ ಮಹಿಳಾ ನೇತೃತ್ವದ ಬಂಡುಕೋರರ ಗುಂಪೊಂದು ಕನಿಷ್ಠ 10 ಖಾಲಿ ಮನೆಗಳು ಮತ್ತು ಒಂದು ಶಾಲೆಯನ್ನು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಣಿಪುರ ಪೊಲೀಸರು ನೀಡಿದ ಮಾಹಿತಿ ಪ್ರಕಾರ, "ಶನಿವಾರ ಸಂಜೆ ನಡೆದ ದಾಳಿಯ ಸಂದರ್ಭದಲ್ಲಿ ನೂರಾರು ಮಹಿಳೆಯರ ನೇತೃತ್ವದ ಬಂಡುಕೋರರ ಗುಂಪೊಂದು ಅಮಾನುಷವಾಗಿ ವರ್ತಿಸಿದೆ. ಅವರು ಟೋರ್ಬಂಗ್ ಬಜಾರ್‌ನಲ್ಲಿರುವ ಮಕ್ಕಳ ಟ್ರೆಷರ್ ಹೈಸ್ಕೂಲ್‌ಗೆ ಬೆಂಕಿ ಹಚ್ಚಿದ್ದಾರೆ" ಎಂದು ತಿಳಿಸಿದ್ದಾರೆ.
ಬಿಎಸ್‌ಎಫ್ ವಾಹನ ಕಸಿದುಕೊಂಡರು: "ದಾಳಿಕೋರರು ಬರುತ್ತಿರುವುದನ್ನು ಕಂಡು ನಾವು ಭಯಭೀತರಾದೆವು. ನೂರಾರು ಮಹಿಳೆಯರ ನೇತೃತ್ವದಲ್ಲಿ ದಾಳಿ ನಡೆಸಿದ್ದರಿಂದ ನಾವೆಲ್ಲ ಗಾಬರಿಗೊಂಡು ಪ್ರತಿದಾಳಿ ನಡೆಸಲು ಹಿಂದೇಟು ಹಾಕಿದೆವು. ಕೋಪಗೊಂಡ ಗುಂಪು ಬಿಎಸ್‌ಎಫ್ ವಾಹನವನ್ನು ಕಸಿದುಕೊಂಡು ನಮ್ಮ ಮನೆಗಳಿಗೆ ಬೆಂಕಿ ಹಚ್ಚಿದರು. ಬಳಿಕ, ಬಿಎಸ್‌ಎಫ್ ವಾಹನವನ್ನೂ ತೆಗೆದುಕೊಂಡು ಹೋಗಲು ಪ್ರಯತ್ನಿಸಿದರು. ಆದ್ರೆ, ಪ್ರದೇಶದಲ್ಲಿ ನಿಯೋಜಿಸಿದ್ದ ಪಡೆ ಮತ್ತು ಸ್ಥಳೀಯ ಸ್ವಯಂಸೇವರು ಗುಂಡಿನ ದಾಳಿ ನಡೆಸಿದ್ದು ಬಂಡುಕೋರರ ಪ್ರಯತ್ನವನ್ನು ವಿಫಲಗೊಳಿಸಲಾಯಿತು" ಎಂದು ಸ್ಥಳೀಯರೊಬ್ಬರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ : ಮಣಿಪುರ ಮಹಿಳೆಯರ ಮೇಲೆ ಅಮಾನುಷ ದೌರ್ಜನ್ಯ : ಬಾಲಾಪರಾಧಿ ಸೇರಿ 6 ಮಂದಿ ಸೆರೆ, ವಲಸೆ ಹೋಗದಂತೆ ಸರ್ಕಾರದ ಮನವಿ
ಮಣಿಪುರ ರಾಜ್ಯಾದ್ಯಂತ ನಡೆಯುತ್ತಿರುವ ಜನಾಂಗೀಯ ಘರ್ಷಣೆಗಳ ಮಧ್ಯೆ ಇಬ್ಬರು ಬುಡಕಟ್ಟು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಈ ಹಿಂದೆ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ದೇಶದ ಸ್ವಾತಂತ್ರ್ಯ ಹೋರಾಟಗಾರರೊಬ್ಬರ ಪತ್ನಿಯನ್ನು ಸಜೀವವಾಗಿ ದಹನ ಮಾಡಿರುವ ಘಟನೆ ನಿನ್ನೆ (ಭಾನುವಾರ) ವರದಿಯಾಗಿತ್ತು.
ಇದನ್ನೂ ಓದಿ : Manipur Violence : ವದಂತಿ, ಸುಳ್ಳು ಸುದ್ದಿ ಮಣಿಪುರ ಹಿಂಸಾಚಾರ ತೀವ್ರಗೊಳ್ಳಲು ಪ್ರಮುಖ ಕಾರಣ: ಅಧಿಕಾರಿಗಳ ಹೇಳಿಕೆ
ಭೀಕರ ಹಿಂಸಾಚಾರಕ್ಕೇನು ಕಾರಣ? : ರಾಜ್ಯದಲ್ಲಿ ಪರಿಶಿಷ್ಟ ಪಂಗಡದ (ಎಸ್‌ಟಿ) ಮೀಸಲಾತಿ ವಿಷಯವಾಗಿ ಬುಡಕಟ್ಟು ಸಮುದಾಯಗಳಾದ ಕುಕಿ ಹಾಗೂ ಮೈತೇಯಿ ಸಮುದಾಯದ ನಡುವೆ ಮೇ 3 ರಿಂದ ಮಣಿಪುರ ರಾಜ್ಯಾದ್ಯಂತ ಜನಾಂಗೀಯ ಹಿಂಸಾಚಾರ ನಡೆಯುತ್ತಿದೆ. ಇದುವರೆಗೆ 160ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಸಾವಿರಾರು ಮಂದಿ ಗಾಯಗೊಂಡಿದ್ದು, ಅನೇಕರು ರಾಜ್ಯದಿಂದ ಬೇರೆಡೆ ಸ್ಥಳಾಂತರವಾಗಿ ಆಶ್ರಯ ಪಡೆದಿದ್ದಾರೆ. ಅಲ್ಲಿನ ಸರ್ಕಾರ ಶಾಂತಿ ಸ್ಥಾಪನೆಗೆ ಸಾಕಷ್ಟು ಪಯತ್ನಪಟ್ಟರೂ ಹಿಂಸಾಚಾರ ನಿಲ್ಲುತ್ತಿಲ್ಲ.
ಇದನ್ನೂ ಓದಿ : ಮಣಿಪುರ : ಮತ್ತೊಂದು ಹೃದಯ ವಿದ್ರಾವಕ ಘಟನೆ.. ಸ್ವಾತಂತ್ರ್ಯ ಹೋರಾಟಗಾರನ ಪತ್ನಿಯನ್ನು ಜೀವಂತ ದಹಿಸಿದ ಸಶಸ್ತ್ರ ಗುಂಪು