ಚಂಡೀಗಢ: ದೆಹಲಿ ಆಮ್ ಆದ್ಮಿ ಪಕ್ಷದ ಶಾಸಕರನ್ನು ಬಿಜೆಪಿ ಸೆಳೆಯಲು ಯತ್ನಿಸಿದೆ ಎಂಬ ಆರೋಪದ ಬಳಿಕ ಇದೀಗ ಪಂಜಾಬ್ನಲ್ಲೂ ಆಪರೇಷನ್ ಕಮಲದ ದೂರು ಕೇಳಿಬಂದಿದೆ. ಪಂಜಾಬ್ ಹಣಕಾಸು ಸಚಿವರೇ ಈ ಆರೋಪವನ್ನು ಮಾಡಿದ್ದು, ರಾಜಕೀಯ ವಲಯದಲ್ಲಿ ಚರ್ಚೆ ಬಿಸಿಯೇರಿದೆ.
ಪಂಜಾಬ್‌ನಲ್ಲಿ ಎಎಪಿ ಸರ್ಕಾರವನ್ನು ಉರುಳಿಸಲು ಬಿಜೆಪಿ ಯತ್ನಿಸುತ್ತಿದೆ. ಆಪ್ ಶಾಸಕರನ್ನು ಖರೀದಿಸಲು ಆ ಪಕ್ಷದ ನಾಯಕರು ಮುಂದಾಗಿದ್ದಾರೆ. ಇದಕ್ಕಾಗಿ ಕೋಟ್ಯಂತರ ರೂಪಾಯಿ ಆಮಿಷವನ್ನು ಒಡ್ಡಲಾಗಿದೆ ಎಂದು ಎಎಪಿ ನಾಯಕ ಮತ್ತು ಪಂಜಾಬ್ ಹಣಕಾಸು ಸಚಿವ ಹರ್ಪಾಲ್ ಚೀಮಾ ಗಂಭೀರ ಆರೋಪ ಮಾಡಿದರು.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಹರ್ಪಾಲ್ ಚೀಮಾ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರಲ್ಲದೇ, ಪಂಜಾಬ್‌ನಲ್ಲಿ ಬಿಜೆಪಿ ಆಪರೇಷನ್ ಕಮಲಕ್ಕೆ ಮುಂದಾಗಿದೆ. ಎಎಪಿಯ 10 ಶಾಸಕರನ್ನು ಕುದುರೆ ವ್ಯಾಪಾರ ಮಾಡಲು ಅವರನ್ನು ಸಂಪರ್ಕಿಸಲಾಗಿದೆ.
ಆಪ್ ಸರ್ಕಾರ ಉರುಳಿಸಲು 1375 ಕೋಟಿ ರೂಪಾಯಿ ಆಫರ್ ನೀಡಲಾಗಿದೆ. 7 ರಿಂದ 10 ಶಾಸಕರನ್ನು ಆಪರೇಷನ್ ಕಮಲ ಮಾಡಲು ಹೊಂಚು ಹಾಕಲಾಗಿದೆ ಎಂದು ಆಪಾದಿಸಿದರು.
ಪ್ರತಿ ಶಾಸಕರಿಗೆ 25 ಕೋಟಿ ರೂ. ಆಫರ್: ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷದ ಶಾಸಕರ ಖರೀದಿಗೆ ಪ್ರತಿಯೊಬ್ಬರಿಗೆ 25 ಕೋಟಿ ಆಫರ್ ನೀಡಲಾಗಿದೆ. ಬಿಜೆಪಿ ಈ ಹಿಂದೆ ಗೋವಾ, ಕರ್ನಾಟಕ, ಮಹಾರಾಷ್ಟ್ರ ಮತ್ತು ಅರುಣಾಚಲ ಪ್ರದೇಶದಲ್ಲಿ ಇದೇ ರೀತಿ ಮಾಡಿದೆ. ಈಗ ಪಂಜಾಬ್‌ನಲ್ಲಿಯೂ ಸರ್ಕಾರವನ್ನು ಕಿತ್ತೊಗೆಯಲು ಪ್ಲಾನ್ ಮಾಡಿದೆ ಎಂದು ಟೀಕಿಸಿದರು.
ಆಪ್ ಶಾಸಕರಿಗೆ ಸಾಂವಿಧಾನಿಕ ತನಿಖಾ ಸಂಸ್ಥೆಗಳಾದ ಸಿಬಿಐ ಮತ್ತು ಇಡಿಯ ಬೆದರಿಕೆಯೊಡ್ಡಲಾಗಿದೆ. ಪ್ರತಿ ಶಾಸಕರಿಗೆ 25 ಕೋಟಿಯಂತೆ 1375 ಕೋಟಿ ಕಪ್ಪುಹಣವನ್ನು ನೀಡುವ ಆಮಿಷ ಒಡ್ಡಲಾಗಿದೆ. ಕನಿಷ್ಠ 10 ಆಪ್ ಶಾಸಕರನ್ನು ಬಿಜೆಪಿ ಸಂಪರ್ಕಿಸಿದೆ ಎಂದು ಅವರು ಆರೋಪ ಮಾಡಿದರು.
ಕೆಲ ದಿನಗಳ ಹಿಂದಷ್ಟೇ ದೆಹಲಿ ಆಪ್ ಸರ್ಕಾರವನ್ನು ಕೆಡವಲು ಬಿಜೆಪಿ ಯತ್ನ ನಡೆಸುತ್ತಿದೆ. ಕುದುರೆ ವ್ಯಾಪಾರಕ್ಕೆ ಇಳಿದಿರುವ ಬಿಜೆಪಿ ಆಪ್ ಶಾಸಕರನ್ನು ಖರೀದಿಸಲು ಮುಂದಾಗಿದೆ ಎಂದು ಆರೋಪಿಸಿದ್ದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸಿ ಗೆಲುವು ಸಾಧಿಸಿದ್ದರು.