ಪಂಜಾಬ್: ಪಂಜಾಬ್ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿದ್ದು, ಅಧಿಕಾರದ ಚುಕ್ಕಾಣಿ ಹಿಡಿಯುವ ತವಕದಲ್ಲಿರುವ ಆಮ್ ಆದ್ಮಿ ಪಕ್ಷ ರಾಜ್ಯದ ಜನರಿಗೆ ಭರಪೂರ ಕೊಡುಗೆಗಳನ್ನು ಘೋಷಣೆ ಮಾಡಿದೆ. ಇದೀಗ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆಯನ್ನು ಪಕ್ಷವು ಪಂಜಾಬ್ ಜನತೆಗೆ ಬಿಟ್ಟಿದೆ.
ಈಗಾಗಲೇ ತಮ್ಮ 'ಮಾದರಿ ಪಂಜಾಬ್' ಅನ್ನು ಜನತೆಯ ಮುಂದಿಟ್ಟಿರುವ ಆಮ್ ಆದ್ಮಿ ಪಕ್ಷದಿಂದ ಸಿಎಂ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಕುತೂಹಲ ಜನರಲ್ಲಿ ಮೂಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅರವಿಂದ್ ಕೇಜ್ರಿವಾಲ್, "ತಮ್ಮ ಪಕ್ಷದ ಸಿಎಂ ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ಜನರೇ ನಿರ್ಧರಿಸುತ್ತಾರೆ. ಜನರು ಆಯ್ಕೆ ಮಾಡಿದ ಅಭ್ಯರ್ಥಿಯೇ ಎಎಪಿ ಸಿಎಂ ಅಭ್ಯರ್ಥಿ ಆಗಲಿದ್ದಾರೆ'' ಎಂದರು.
ಇದೇ ವೇಳೆ, ಕೇಜ್ರಿವಾಲ್ ಅವರು ಸಿಎಂ ಅಭ್ಯರ್ಥಿ ಆಯ್ಕೆಗೆ ವಿನೂತನ ಕ್ರಮ ಪರಿಚಯಿಸಿದ್ದಾರೆ. ಜನರು ಆಪ್ ಪಕ್ಷದಿಂದ ಯಾರು ಸಿಎಂ ಅಭ್ಯರ್ಥಿ ಆಗಬೇಕು ಎಂಬ ಕುರಿತು 7074870748 ಸಂಖ್ಯೆಗೆ ಸಂದೇಶ ರವಾನಿಸಬೇಕು. ಈ ಮೂಲಕ ಜನರು ಯಾರನ್ನು ಆಯ್ಕೆ ಮಾಡಿರುತ್ತಾರೋ ಅವರನ್ನೇ ಸಿಎಂ ಅಭ್ಯರ್ಥಿ ಆಗಿ ಘೋಷಿಸಲಾಗುವುದು ಎಂದು ತಿಳಿಸಿದರು.
ಅಭ್ಯರ್ಥಿಯ ಆಯ್ಕೆ ವಿಚಾರವಾಗಿ ಮೇಲೆ ತಿಳಿಸಿದ ಸಂಖ್ಯೆಗೆ ಕರೆ, ಸಂದೇಶ ಅಥವಾ ವಾಟ್ಸಾಪ್ ಮಾಡಬೇಕು. ಈ ಪ್ರಕ್ರಿಯೆಗೆ ಜನವರಿ 17 ರ ಸಂಜೆ 5 ಗಂಟೆಯವರೆಗೆ ಅವಕಾಶ ಇರುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮುಂದಿನ ವಾರ ಪಂಜಾಬ್ ಸಿಎಂ ಅಭ್ಯರ್ಥಿಯ ಹೆಸರು ಘೋಷಣೆ: ಅರವಿಂದ್ ಕೇಜ್ರಿವಾಲ್
ಪಂಜಾಬ್ ವಿಧಾನಸಭಾ ಚುನಾವಣೆಗೆ ಫೆಬ್ರವರಿ 14 ರಂದು ಮತದಾನ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.