ವಿಸಾವದರ್ (ಗುಜರಾತ್): ಗುಜರಾತ್ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ನಂತರವೂ ರಾಜ್ಯ ರಾಜಕೀಯ ಹೊಸ ಕಾವು ಪಡೆದಿದೆ. ಸೋಮವಾರ ನೂತನ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಆದರೆ, ಇದಕ್ಕೂ ಮುನ್ನವೇ ವಿಸಾವದರ್ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಶಾಸಕ ಭೂಪತ್ ಭಯಾನಿ ಬಿಜೆಪಿ ಸೇರುತ್ತಾರೆ ಎಂಬ ವಿಷಯ ಚರ್ಚೆಗೆ ಗ್ರಾಸವಾಗಿದೆ.
ವಿಸಾವದರ್ ವಿಧಾನಸಭಾ ಕ್ಷೇತ್ರದಿಂದ ಗೆದ್ದಿರುವ ಭೂಪತ್ ಭಯಾನಿ ಒಂದು ಕಾಲದಲ್ಲಿ ಬಿಜೆಪಿಯ ಹಿರಿಯ ನಾಯಕ ಮತ್ತು ಕ್ಷೇತ್ರದ ಪ್ರಬಲ ನಾಯಕರಾಗಿ ಗುರುತಿಸಿಕೊಂಡಿದ್ದರು. ಆದರೆ, ಕಾರಣಾಂತರಗಳಿಂದ ಅವರು ಬಿಜೆಪಿ ತೊರೆದು ಆಮ್ ಆದ್ಮಿ ಪಕ್ಷ ಸೇರಿದ್ದಾರೆ.
ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾದ ನಂತರ ಭೂಪತ್ ಭಯಾನಿ ವಿಧಾನಸಭೆ ಚುನಾವಣೆಗೂ ಮುನ್ನ ತಾವೇ ಕ್ಷೇತ್ರದಲ್ಲಿ ಜನಸಂಪರ್ಕ ಹೆಚ್ಚಿಸಿಕೊಂಡಿದ್ದರು. ಸರಪಂಚ್ ಆಗಿದ್ದ ಭೂಪತ್ ಭಯಾನಿ ಹಳ್ಳಿ ಹಳ್ಳಿಗೆ ತೆರಳಿ ಆಪ್ ಬಗ್ಗೆ ಸಾರ್ವಜನಿಕ ಪ್ರಚಾರ ಮಾಡಿದ್ದರು. ಅವರ ಬಲಿಷ್ಠ ನಾಯಕತ್ವವನ್ನು ಕಂಡು ಆಮ್ ಆದ್ಮಿ ಪಕ್ಷವು ಅಭ್ಯರ್ಥಿಯನ್ನು ಘೋಷಿಸಿತ್ತು.
ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹರ್ಷದ್ ರಿಬಾಡಿಯಾ ಅವರನ್ನು ಸೋಲಿಸಿ ಭೂಪತ್ ಭಯಾನಿ ಗೆದ್ದು ವಿಧಾನಸಭೆಗೆ ಪ್ರವೇಶ ಪಡೆದಿದ್ದಾರೆ. ಇದೀಗ ಅವರು ಮತ್ತೆ ಬಿಜೆಪಿಗೆ ಸೇರುತ್ತಾರೆ ಎಂಬುದು ಊಹಾಪೋಹಕ್ಕೆ ಕಾರಣವಾಗಿದೆ.
ಬಿಜೆಪಿ ಸೇರುವುದು ಕೇವಲ ವದಂತಿ: ಈ ಬಗ್ಗೆ ಶಾಸಕ ಭೂಪತ್ ಭಯಾನಿ ಸ್ವತಃ ಪ್ರತಿಕ್ರಿಯೆ ನೀಡಿದ್ದು, ನಾನು ಯಾವುದೇ ಪಕ್ಷಕ್ಕೆ ಸೇರುತ್ತಿಲ್ಲ. ಬಿಜೆಪಿ ಸೇರುವುದು ಕೇವಲ ವದಂತಿ. ವೈಯಕ್ತಿಕ ಕೆಲಸದ ನಿಮಿತ್ತ ಗಾಂಧಿನಗರಕ್ಕೆ ಹೋಗಿದ್ದೆ. ನನಗೆ ಆಮ್ ಆದ್ಮಿ ಪಕ್ಷದ ಮೇಲೆ ಕೋಪವಿಲ್ಲ. ಏನಾದರೂ ಕ್ಷೇತ್ರದ ಜನರೊಂದಿಗೆ ಸಮಾಲೋಚಿಸಿದ ನಂತರವೇ ನಾನು ತೀರ್ಮಾನ ಕೈಗೊಳ್ಳುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಗುಜರಾತ್ನ ನೂತನ 40 ಶಾಸಕರ ವಿರುದ್ಧ ಕ್ರಿಮಿನಲ್ ಕೇಸ್: ಇದರಲ್ಲಿ ಯಾವ ಪಕ್ಷದವರು, ಎಷ್ಟು ಜನ?