ನವಸಾರಿ( ಗುಜರಾತ್): ಅಭಿವೃದ್ಧಿಯ ಕಲ್ಪನೆಗೆ ಸವಾಲು ಹಾಕುವಂತಹ ವಿಚಿತ್ರ ಪ್ರಕರಣವೊಂದು ಗುಜರಾತ್‌ನಲ್ಲಿ ಬೆಳಕಿಗೆ ಬಂದಿದೆ. ನವಸಾರಿ ಜಿಲ್ಲೆಯ ವಂಸ್ಡಾ ತಾಲೂಕಿನ ಗ್ರಾಮವೊಂದರ ಯುವಕನೊಬ್ಬ ಸಕಾಲದಲ್ಲಿ ಚಿಕಿತ್ಸೆ ದೊರೆಯದೇ ಮೃತಪಟ್ಟಿದ್ದಾನೆ. ಮೂಲ ಸೌಕರ್ಯದ ಕೊರತೆಯಿಂದ ಚಿಕಿತ್ಸೆ ಪಡೆಯಲು ವಿಳಂಬವಾಗುತ್ತಿದೆ. ಗ್ರಾಮದಲ್ಲಿ ರಸ್ತೆ ಇಲ್ಲದ ಕಾರಣ ಆ್ಯಂಬುಲೆನ್ಸ್ ಬರಲು ಸಾಧ್ಯವಾಗುತ್ತಿಲ್ಲ. ಇದೇ ಕಾರಣದಿಂದ ಅನಾರೋಗ್ಯಕ್ಕೆ ಈಡಾಗಿದ್ದ ಯುವಕನೊಬ್ಬನನ್ನು ಒಂದೂವರೆ ಕಿಮೀ ವರೆಗೆ ಹೊತ್ತುಕೊಂಡು ಮುಖ್ಯ ರಸ್ತೆಗೆ ತಂದು ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಆತನ ಜೀವ ಹೋಗಿರುವ ಘಟನೆ ನಡೆದಿದೆ.
ಈ ಘಟನೆಯು ಚಲನಚಿತ್ರದ ಕಥೆಯಂತೆ ತೋರುತ್ತದೆ. ಆದರೆ, ಈ ಘಟನೆಯು ವಾನ್ಸ್ಡಾ ತಾಲೂಕಿನ ಖತಾಂಬಾ ಗ್ರಾಮದಲ್ಲಿ ನಡೆದಿದೆ. ಖತಂಬಾ ಗ್ರಾಮದ ಬಾಬುನಿಯಾ ಎಂಬ ಯುವಕನ ಆರೋಗ್ಯದಲ್ಲಿ ಏರುಪೇರಾಗಿತ್ತು. ಹೀಗಾಗಿ ಆಂಬ್ಯುಲೆನ್ಸ್‌ಗೆ ಕರೆ ಮಾಡಲಾಗಿತ್ತು. ದುರದೃಷ್ಟವಶಾತ್, ರಸ್ತೆಯ ಕೊರತೆಯಿಂದಾಗಿ ಆಂಬ್ಯುಲೆನ್ಸ್ ಮನೆಗೆ ತಲುಪಲು ಸಾಧ್ಯವಾಗಲಿಲ್ಲ. ಯುವಕನನ್ನು ಸುಮಾರು ಒಂದೂವರೆ ಕಿಲೋಮೀಟರ್ ಕಾಲ್ನಡಿಗೆಯಲ್ಲಿ ಕರೆದೊಯ್ಯಲಾಯಿತು. ಸಾಕಷ್ಟು ಪ್ರಯತ್ನದ ನಂತರ ಯುವಕನನ್ನು ಆಂಬ್ಯುಲೆನ್ಸ್‌ಗೆ ಸ್ಥಳಾಂತರಿಸಲಾಯಿತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಆರಂಭಿಸುವ ಮುನ್ನವೇ ಆ ಯುವಕ ಉಸಿರು ಚಲ್ಲಿದ್ದ. ಇನ್ನು ಹೀಗೆ ಅಸುನೀಗಿದ ಆತನ ಮೃತದೇಹವನ್ನು ಕಟ್ಟಿಗೆ ವಿಶೇಷ ಪೆಟ್ಟಿಗೆ ತಯಾರಿಸಿ, ಗ್ರಾಮಕ್ಕೆ ಸೇರಿಸಬೇಕಾದರೆ ಹರಸಾಹಸವನ್ನೇ ಪಡಬೇಕಾಯಿತು. ಇವೆಲ್ಲ ಇಲ್ಲಿನ ಮೂಲ ಸೌಕರ್ಯಗಳು ಹೇಗಿವೆ ಎಂಬುದಕ್ಕೆ ಹಿಡಿದ ಕರಾಳ ಕೈ ಗನ್ನಡಿ.
ಗ್ರಾಮಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಲಾಯಿತು. ತಾಲೂಕು ಪಂಚಾಯಿತಿಯಲ್ಲೂ ಗ್ರಾಮಕ್ಕೆ ಇಲ್ಲದ ಮೂಲ ಸೌಕರ್ಯಗಳ ಬಗ್ಗೆ ಪ್ರಸ್ತಾಪಿಸಲಾಗಿದೆ. ಇಂತಹ ಘಟನೆಗಳು ಮರುಕಳುಹಿಸಿದಂತೆ ಕ್ರಮ ಕೈಗೊಳ್ಳುವಂತೆ ಸಂಬಂಧ ಪಟ್ಟ ಎಲ್ಲರ ಗಮನಕ್ಕೆ ತರಲಾಗಿದೆ ಎಂದು ಸ್ಥಳೀಯ ನಾಯಕರೊಬ್ಬರು ಹೇಳಿದ್ದಾರೆ.
ವಸಂದಾ ತಾಲೂಕಿನ ಹಲವು ಗ್ರಾಮಗಳು ತೀರಾ ಒಳಗಿವೆ. ಅವುಗಳು ಮೂಲ ಸವಲತ್ತುಗಳಿಂದ ದೂರ ಇವೆ. ಪಟ್ಟಣಗಳನ್ನು ತಲುಪಬೇಕಾದರೆ ಈ ಗ್ರಾಮಗಳ ಜನರು ಹರಸಾಹಸ ಪಡಬೇಕಿದೆ. ಸುಮಾರು 50 ಕ್ಕೂ ಹೆಚ್ಚು ಡಾಂಬರುರಹಿತ ರಸ್ತೆಗಳಿವೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಈ ಗ್ರಾಮಗಳಿಗೆ ಇನ್ನೂ ಡಾಂಬರ್ ರಸ್ತೆಗಳಿಲ್ಲ ಎನ್ನುವುದು ಇಲ್ಲಿನ ದುರ್ದೈವ. ಗುಡ್ಡುಗಾಡುಗಳ ಅಂಚಿನಲ್ಲಿರುವ ಈ ಗ್ರಾಮಗಳಲ್ಲಿ ತುರ್ತು ಸಂದರ್ಭಗಳಲ್ಲಿ, ರೋಗಿಗಳು ಸಾವಿನೊಂದಿಗೆ ಹೋರಾಡಬೇಕಾದ ಪರಿಸ್ಥಿತಿ ಇದೆ.
ಸ್ಥಳೀಯರು ಹೇಳುವ ಪ್ರಕಾರ, ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಡಾಂಬರೀಕರಣ ಮಾಡಬೇಕಿದೆ. ಹೀಗೆ ಮಾಡಿದರೆ ಆ್ಯಂಬುಲೆನ್ಸ್ ಇತರ ದೊಡ್ಡ ವಾಹನಗಳು ಗ್ರಾಮಕ್ಕೆ ತಲುಪಿ ಜನರ ಜೀವ ಉಳಿಸಬಹುದು. ಆದರೆ ಇಲ್ಲಿನ ಗ್ರಾಮಸ್ಥರು ಹದಗೆಟ್ಟ ರಸ್ತೆಯಲ್ಲಿ ಕಾಲ್ನಡಿಗೆಯಲ್ಲಿ ಸಂಚರಿಸಬೇಕಾದ ದುಃಸ್ಥಿತಿ ಇದೆ.
ಈ ಬಗ್ಗೆ ಗಮನ ಹರಿಸುತ್ತೇವೆ. ಮೂಲ ಸವಲತ್ತು ಇಲ್ಲದೇ ಇರುವ ಬಗ್ಗೆ ನಮ್ಮ ಗಮನಕ್ಕೆ ಬಂದಿಲ್ಲ. ನಾವು ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಉನ್ನತ ಅಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳುತ್ತೇವೆ ಎಂದು ರಸ್ತೆ ನಿರ್ಮಾಣ ಇಲಾಖೆ ಉಪ ಕಾರ್ಯನಿರ್ವಾಹಕ ಎಂಜಿನಿಯರ್ ಹೇಳಿದ್ದಾರೆ.