ಕಾಸರಗೋಡು(ಕೇರಳ) : ಕಾಸರಗೋಡು - ಕರ್ನಾಟಕ ಗಡಿಭಾಗದ ಬದಿಯಡ್ಕ ಎಂಬ ಗ್ರಾಮದಲ್ಲಿ ಅವಿವಾಹಿತರು ಮೃತಪಟ್ಟರೆ ಅವರಿಗೆ ಮದುವೆ ಮಾಡಿಸಿದ ಬಳಿಕವೇ ಅಂತ್ಯಸಂಸ್ಕಾರ ಮಾಡುವ ಸಂಪ್ರದಾಯವಿದೆ. ಇದನ್ನು ಹಲವು ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ಈ ವಿವಾಹ ಸಾಮಾನ್ಯರಿಗೆ ಮಾಡುವ ಮದುವೆಯಂತೇ ಮಾಡುವುದು ವಿಶೇಷವಾಗಿದೆ.
ಮದುವೆ ಹಿನ್ನೆಲೆಯಲ್ಲಿ ಗ್ರಾಮದ ಬೀದಿಗಳನ್ನು ತಳಿರು-ತೋರಣಗಳಿಂದ ಅಲಂಕರಿಸಲಾಗುತ್ತದೆ. ಆಹ್ವಾನಿತರಿಗೆ ವಿಸ್ತಾರವಾದ ಸ್ಥಳದಲ್ಲಿ ಔತಣವನ್ನು ಏರ್ಪಡಿಸುತ್ತಾರೆ. ಮೃತ ದೇಹದ ಬದಲಿಗೆ ಹುಲ್ಲಿನಿಂದ ಮಾಡಿದ ಎರಡು ಗೊಂಬೆಗಳಿಗೆ ವಾದ್ಯಗಳೊಂದಿಗೆ ಶಾಸ್ತ್ರೋಕ್ತವಾಗಿ ಮದುವೆಯನ್ನು ಮಾಡಿಸುತ್ತಾರೆ.
ಸತ್ತವರಿಗೆ ವಿವಾಹ .. ಈಗಲೂ ಮುಂದುವರಿದ ಸಂಪ್ರದಾಯ
ಈ ಭಾಗದಲ್ಲಿ ವಾಸಿಸುವ ಮೊಗರೆ ಸಮುದಾಯದಲ್ಲಿ ಸತ್ತವರಿಗೆ ವಿವಾಹ ಮಾಡುವುದನ್ನು ಇಂದಿಗೂ ಮುಂದುವರೆಸಿಕೊಂಡು ಬಂದಿದ್ದಾರೆ. ಮೊದಲು ಸತ್ತ ಯುವಕನ ಕುಟುಂಬವು ವಧುವನ್ನು ಹುಡುಕಲು ಪ್ರಾರಂಭಿಸುತ್ತದೆ. ಅವರದೇ ಸಮುದಾಯದ ಅವಿವಾಹಿತ ಯುವತಿ ಸಾವನ್ನಪ್ಪಿದರೆ ಇದನ್ನು ಪತ್ತೆ ಹಚ್ಚಲಾಗುತ್ತದೆ. ಬಳಿಕ ಮೃತ ಯುವಕನ ಕುಟುಂಬವು ಹುಡುಗಿಯ ಮನೆಗೆ ಭೇಟಿ ನೀಡಿ ಮದುವೆಗೆ ಕುಟುಂಬದ ಒಪ್ಪಿಗೆಯನ್ನು ಕೋರುತ್ತದೆ. ನಂತರ ಒಟ್ಟಿಗೆ ಕುಳಿತು ಇಬ್ಬರಿಗೂ ಮದುವೆ ಮಾಡಿಸಲು ನಿರ್ಧರಿಸುತ್ತಾರೆ.
ಮದುವೆಗೆ ದಿನಾಂಕವನ್ನು ನಿಗದಿ ಮಾಡಿ ಸಂಬಂಧಿಕರು, ಸ್ಥಳೀಯ ಜನರನ್ನು ಆಹ್ವಾನಿಸಲು ಆಹ್ವಾನ ಪತ್ರಗಳನ್ನು ಮುದ್ರಿಸಿ ಹಂಚುತ್ತಾರೆ. ನಂತರ ನಡೆಯುವ ಎಲ್ಲ ಪ್ರಕ್ರಿಯೆಗಳು ಮದುವೆಯಂತೆಯೇ ಇರುತ್ತದೆ.
ವಧುವಿನ ಮನೆಯಲ್ಲಿ ವಿವಾಹವನ್ನು ನೆರವೇರಿಸುವ ಹಿನ್ನೆಲೆಯಲ್ಲಿ ಆ ಇಡೀ ಪ್ರದೇಶ ಅಲಂಕರಿಸಲಾಗುತ್ತದೆ. ಮದುಮಗನನ್ನು ವಧುವಿನ ಮನೆಗೆ ಕರೆದೊಯ್ಯುವಾಗ ನಾದಸ್ವರ, ತಾಳವಾದ್ಯವನ್ನು ನುಡಿಸಲಾಗುತ್ತದೆ. ಮದುವೆಯ ಸಮಾರಂಭದಲ್ಲಿ ಮದುಮಗನಿಗೊಂದು ಗಂಟು, ಕಪ್ಪು ಮಣಿಗಳಿಂದ ಮಾಡಿದ ಸರಪಳಿಯನ್ನು ಕಟ್ಟಲಾಗುತ್ತದೆ. ವಧು ವರನ ಮನೆಗೆ ಪ್ರವೇಶಿಸಿದ ಬಳಿಕ ಸಮಾರಂಭ ಅಲ್ಲಿ ಕೊನೆಗೊಳ್ಳುತ್ತದೆ. ಬಳಿಕ ಒಂದು ನಿರ್ದಿಷ್ಟ ಮರದ ಕೆಳಗೆ ಆ ಗೊಂಬೆಗಳನ್ನು ಎಸೆಯಲಾಗುತ್ತದೆ.
ಸತ್ತವರಿಗೆ ಮದುವೆ ಮಾಡದಿದ್ದರೆ ಕೆಡಾಗುತ್ತೆ ಎಂಬ ನಂಬಿಕೆ:
ಈ ಮದುವೆಯು ಸ್ವರ್ಗದಲ್ಲಿ ನಡೆಯುತ್ತದೆ. ಮೃತಪಟ್ಟ ಯುವಕ, ಯುವತಿ ಸ್ವರ್ಗದಲ್ಲಿ ಸಂತೋಷದಿಂದ ಬದುಕುತ್ತಾರೆ ಎಂದು ಈ ಸಮುದಾಯವು ನಂಬುತ್ತದೆ. ಮೊಗರೆ ಸಮುದಾಯದವರು ತಮ್ಮ ಅವಿವಾಹಿತ ಸತ್ತವರಿಗೆ ಮದುವೆ ಮಾಡದಿದ್ದರೆ ತಮಗೆ ಕೆಡಾಗಬಹುದೆಂದು ನಂಬಿದ್ದಾರೆ. ಹೀಗಾಗಿಯೇ ಸತ್ತವರಿಗಾಗಿ ಈ ವಿಶೇಷ ವಿವಾಹ ಮಾಡುತ್ತಾರೆ. ಇದನ್ನು ಮೂಢ ನಂಬಿಕೆ ಎಂದು ತಳ್ಳಿ ಹಾಕುವವರೂ ಹಲವರಿದ್ದಾರೆ, ಆದರೆ, ಮೊಗರೆ ಸಮುದಾಯದವರಿಗೆ ಬದುಕಿರುವ ಜನರಿಗಾಗಿ ನಡೆಸುವ ಸಾಮಾನ್ಯ ಮದುವೆಯಂತೇ ಮೃತರರಿಗೂ ನಡೆಸುವುದು ವಿಶೇಷ ಎನಿಸುತ್ತದೆ.