ನಲ್ಬರಿ (ಅಸ್ಸೋಂ): ಹಳ್ಳಿಗಳು ರಾಷ್ಟ್ರದ ಬೆನ್ನೆಲುಬು ಎಂದು ರಾಷ್ಟ್ರಪಿತ ಮಹಾತ್ಮ ಗಾಂಧಿ ಹೇಳಿದ್ದಾರೆ. ಅನೇಕ ಗ್ರಾಮಗಳು ಗಾಂಧೀಜಿಯವರ ಮಾತುಗಳಿಂದ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದ್ದರೆ ಇನ್ನೂ ಕೆಲ ಗ್ರಾಮಗಳು ಮೂಲ ಸೌಕರ್ಯಗಳಿಂದ ವಂಚಿತವಾಗಿವೆ. ಕೆಲವು ಮಂದಿ ತಮ್ಮ ಸ್ವಂತ ಊರುಗಳಲ್ಲಿ ಉದ್ಯೋಗ ಸಿಗದ ಕಾರಣ ನಗರಗಳತ್ತ ಮುಖ ಮಾಡುತ್ತಿದ್ದಾರೆ. ಮತ್ತೆ ಕೆಲವರು ಮೂಲ ಸೌಕರ್ಯಗಳ ಕೊರತೆಯಿಂದಾಗಿ ಹಳ್ಳಿಗಳನ್ನು ತೊರೆಯುತ್ತಿದ್ದಾರೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಅಸ್ಸೋಂನ ನಲ್ಬರಿ ಜಿಲ್ಲೆಯ ಬರ್ಧನರಾ ಗ್ರಾಮ.
ಹೌದು, ಒಂದು ಕಾಲದಲ್ಲಿ ಜನರಿಂದ ತುಂಬಿ ತುಳುಕುತ್ತಿದ್ದ ಗ್ರಾಮದಲ್ಲಿ ಇಂದು ಐವರು ಸದಸ್ಯರಿರುವ ಒಂದೇ ಕುಟುಂಬ ವಾಸವಾಗಿದೆ. ಕಳೆದ ಕೆಲ ದಶಕಗಳ ಹಿಂದೆ ಅಂದಿನ ಮುಖ್ಯಮಂತ್ರಿ ಬಿಷ್ಣುರಾಮ್ ಮೇಧಿ ಅವರು ಬರ್ಧನಾರ ಗ್ರಾಮದ ರಸ್ತೆ ಉದ್ಘಾಟಿಸಿದ್ದರು. ಆದರೆ, ಪದೇ ಪದೆ ನೀರು ಹರಿಯುತ್ತಿರುವುದರಿಂದ ರಸ್ತೆ ಸಂಪೂರ್ಣ ಹಾಳಾಗಿದೆ. ಸರ್ಕಾರ ಪುನಃ ರಸ್ತೆ ದುರಸ್ತಿ ಮಾಡದ ಹಿನ್ನೆಲೆ ಬಹುತೇಕ ಕುಟುಂಬಗಳು ನಗರಗಳಿಗೆ ವಲಸೆ ಹೋಗಿವೆ.
2011ರ ಜನಗಣತಿಯ ಪ್ರಕಾರ, ಬರ್ಧನಾರಾ ಗ್ರಾಮದಲ್ಲಿ 16 ಮಂದಿ ಮಾತ್ರ ವಾಸವಾಗಿದ್ದರು. ಪ್ರಸ್ತುತ ಭೀಮ್ಲಾ ದೇಕಾ ಎಂಬುವರು ಮತ್ತು ಅವರ ಪತ್ನಿ ಅನಿಮಾ ಹಾಗೂ ಮೂವರು ಮಕ್ಕಳಾದ ನರೇನ್, ದೀಪಾಲಿ ಮತ್ತು ಸುತಿ ಮಾತ್ರ ಬರ್ಧನರಾದಲ್ಲಿ ವಾಸಿಸುತ್ತಿದ್ದಾರೆ. ಈ ಹಳ್ಳಿಯು ನಲ್ಬರಿ ಜಿಲ್ಲಾ ಕೇಂದ್ರದಿಂದ 12 ಕಿ.ಮೀ ದೂರದಲ್ಲಿದೆ. ಸದ್ಯಕ್ಕೆ ಗ್ರಾಮಕ್ಕೆ ರಸ್ತೆ, ವಿದ್ಯುತ್ ಸೇರಿದಂತೆ ಅಗತ್ಯ ಮೂಲ ಸೌಲಭ್ಯಗಳಿಲ್ಲ. ಮಳೆಯಿಂದಾಗಿ ಗ್ರಾಮದ ರಸ್ತೆಗಳು ಹಾಳಾಗಿ ಜಲಾವೃತಗೊಂಡಿವೆ. ದೋಣಿಯ ಸಹಾಯದಿಂದ ಗ್ರಾಮವನ್ನು ದಾಟಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಭೀಮ್ಲಾ ದೇಕಾ ತಮ್ಮ ಅಳಲು ತೋಡಿಕೊಂಡಿದ್ದಾರೆ.
''ಗ್ರಾಮದ ಪರಿಸ್ಥಿತಿ ಕುರಿತು ಜಿಲ್ಲಾ ಪರಿಷತ್ ಕಚೇರಿಗೆ ಅನೇಕ ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ, ಮಕ್ಕಳು ಶಾಲಾ ಕಾಲೇಜಿಗೆ ತೆರಳಲು ಯಾವುದಾದರೂ ವಾಹನ ಹತ್ತಬೇಕಾದರೆ ಎರಡು ಕಿ.ಮೀ. ಗ್ರಾಮದಿಂದ ನಡೆದುಕೊಂಡು ಹೋಗಬೇಕು. ಮಳೆಗಾಲದಲ್ಲಿ ನೀರು, ಕೆಸರು ತುಂಬಿದ ರಸ್ತೆಯಲ್ಲೇ ಸಾಗಿ ಮಕ್ಕಳನ್ನು ದೋಣಿಯ ಸಹಾಯದಿಂದ ರಸ್ತೆ ಬಳಿ ಬಿಟ್ಟು ಬರುತ್ತೇವೆ. ವಿದ್ಯುತ್ ಇಲ್ಲದ ಕಾರಣ ಸೀಮೆಎಣ್ಣೆ ದೀಪದಲ್ಲಿಯೇ ಓದಬೇಕು. ಕೃಷಿ ಮತ್ತು ಪಶುಸಂಗೋಪನೆಯೇ ನಮ್ಮ ಆದಾಯದ ಮೂಲವಾಗಿದೆ. ಸ್ಥಳೀಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮದಲ್ಲಿ ಈ ಪರಿಸ್ಥಿತಿ ಉಂಟಾಗಿದೆ" ಎಂದು ಅನಿಮಾ ಆರೋಪಿಸಿದ್ದಾರೆ.
ಇದನ್ನೂ ಓದಿ : ಗ್ರಾಮಕ್ಕೆ ಮೂಲ ಸೌಕರ್ಯ ಕಲ್ಪಿಸುವಂತೆ ಪ್ರಧಾನಿ ಮೋದಿಗೆ ಪತ್ರ: ಪಿಎಂ ಕಚೇರಿಯಿಂದ ಮರುಪತ್ರ
ಇನ್ನು ಬರ್ಧನಾರಾ ಹಳ್ಳಿಯ ಪರಿಸ್ಥಿತಿ ಬಗ್ಗೆ ತಿಳಿದ ಗ್ರಾಮ್ಯ ವಿಕಾಸ್ ಮಂಚ ಎಂಬ ಸ್ವಯಂಸೇವಾ ಸಂಸ್ಥೆಯೊಂದು ಗ್ರಾಮದಲ್ಲಿರುವ ಜಮೀನನ್ನು ಕೃಷಿ ಭೂಮಿಯಾಗಿ ಪರಿವರ್ತಿಸುವ ಕೆಲಸ ಮಾಡುತ್ತಿದೆ. ರಾಜ್ಯ ಸರ್ಕಾರ ಗ್ರಾಮಕ್ಕೆ ರಸ್ತೆ, ವಿದ್ಯುತ್ ಸೌಲಭ್ಯ ಕಲ್ಪಿಸಿದರೆ ಗ್ರಾಮ ತೊರೆದಿರುವ ಜನರು ಮರಳಿ ಬರಬಹುದು ಎಂದು ಎನ್‌ಜಿಒ ಪ್ರತಿನಿಧಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ರಸ್ತೆ ಇಲ್ಲ, ಜೋಳಿಗೆಯಲ್ಲಿ ವೃದ್ಧೆಯನ್ನು ಹೊತ್ತು ಆಸ್ಪತ್ರೆಗೆ ಕರೆದೊಯ್ದ ಗ್ರಾಮಸ್ಥರು- ವಿಡಿಯೋ