ಮುಂಬೈ(ಮಹಾರಾಷ್ಟ್ರ): ಕರ್ನಾಟಕದ ಎರಡು ತಿಂಗಳ ಮಗುವಿಗೆ ಮುಂಬೈನ ಆಸ್ಪತ್ರೆವೊಂದರಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಹೃದಯದಲ್ಲಿನ ರಂಧ್ರ ಮುಚ್ಚಲಾಗಿದ್ದು, ದೇಶದಲ್ಲೇ ನಡೆದಿರುವ ಮೊದಲ ಹಾಗೂ ವಿಶ್ವದ ಎರಡನೇ ಪ್ರಕರಣ ಇದಾಗಿದೆ.
ಕರ್ನಾಟಕ ಸೇರಿದಂತೆ ಅನೇಕ ರಾಜ್ಯದ ವೈದ್ಯರು ಮಗುವಿಗೆ ಶಸ್ತ್ರಚಿಕಿತ್ಸೆ ನಡೆಸಲು ನಿರಾಕರಿಸಿದ್ದರು. ಆದರೆ, ಮುಂಬೈನ ಜೆಜೆ ಆಸ್ಪತ್ರೆಯ ಡಾ. ಕಲ್ಯಾಣ್ ಮುಂಡೆ ಅವರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ವಿಶೇಷವೆಂದರೆ ಓಪನ್ ಹಾರ್ಟ್ ಸರ್ಜರಿ ಮಾಡದೇ ಮಗುವಿನ ಹೃದಯದಲ್ಲಿನ ರಂಧ್ರ ಮುಚ್ಚಲಾಗಿದೆ.
ಮಗುವಿನ ಕಾಲಿನ ರಕ್ತನಾಳಗಳ ಮೂಲಕ ಹೃದಯಕ್ಕೆ ವಿಶೇಷ ಟ್ಯೂಬ್ ಸೇರಿ ಮಗುವಿನ ಹೃದಯದಲ್ಲಿನ ರಂಧ್ರ ಮುಚ್ಚಲಾಗಿದೆ. ಕರ್ನಾಟಕದ ಕಾರ್ತಿಕ್ ರಾಥೋಡ್ ಎಂಬ ಎರಡು ತಿಂಗಳ ಮಗು ಶಸ್ತ್ರಚಿಕಿತ್ಸೆಗೊಳಗಾಗಿದೆ. ಮಗುವಿನ ಹೃದಯದಲ್ಲಿ ಆರು ಮಿಲಿಮೀಟರ್ ರಂಧ್ರವಿತ್ತು. ಹೀಗಾಗಿ ಕರ್ನಾಟಕ ಸೇರಿದಂತೆ ಅನೇಕ ವೈದ್ಯರನ್ನ ಸಂಪರ್ಕಿಸಲಾಗಿತ್ತು. ಆದರೆ, ಮಗುವಿನ ತೂಕ ಕೇವಲ 3.5 ಕೆಜಿ ಇದ್ದ ಕಾರಣ ಶಸ್ತ್ರಚಿಕಿತ್ಸೆ ನಡೆಸಲು ಹಿಂದೇಟು ಹಾಕಲಾಗಿತ್ತು.
ಇದನ್ನೂ ಓದಿರಿ: ಕೈ-ಕಾಲು ಇಲ್ಲದ ಶ್ರಮಜೀವಿಗೆ ಆನಂದ್ ಮಹೀಂದ್ರ ಉದ್ಯೋಗದ ಆಫರ್.. ಈತನ ಸ್ಟೋರಿ ಎಲ್ಲರಿಗೂ ಸ್ಫೂರ್ತಿ!
ಹುಟ್ಟಿದ ಮಗುವಿನ ಹೃದಯದಲ್ಲಿ ರಂಧ್ರವಿದ್ದ ಕಾರಣ ಉಸಿರಾಟ ನಡೆಸಲು, ತಾಯಿಯ ಎದೆ ಹಾಲು ಕುಡಿಯಲು ತೊಂದರೆ ಆಗುತ್ತಿತ್ತು. ಶಸ್ತ್ರಚಿಕಿತ್ಸೆ ನಡೆಸಿದ ಬಳಿಕ ಮಗು ಚೇತರಿಸಿಕೊಳ್ಳುತ್ತಿದ್ದು, ಹಾಲು ಕುಡಿಯುವುದರ ಜೊತೆಗೆ ಸರಿಯಾಗಿ ಉಸಿರಾಡುತ್ತಿದೆ ಎಂದು ತಿಳಿದು ಬಂದಿದೆ.
ಮಗುವಿನ ಶಸ್ತ್ರಚಿಕಿತ್ಸೆಗೆ 5 ಲಕ್ಷ ರೂ. ಖರ್ಚಾಗಿದೆ. ಆದರೆ, ಮಹಾತ್ಮ ಜ್ಯೋತಿಬಾ ಫುಲೆ ಆರೋಗ್ಯ ಯೋಜನೆ ಮೂಲಕ ಉಚಿತವಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.