ಕರ್ತಾರ್ಪುರ್ ಸಾಹಿಬ್: ಭಾರತ -ಪಾಕಿಸ್ತಾನ ವಿಭಜನೆಯು ಅನೇಕ ಕುಟುಂಬಗಳನ್ನು ದೂರಮಾಡಿದೆ. ಬೀಬಿ ಮುಮ್ತಾಜ್ ಎಂಬುವವರು ಕೂಡ 1947 ರ ರಕ್ತಸಿಕ್ತ ವಿಭಜನೆಯ ಸಂತ್ರಸ್ತರಾಗಿದ್ದಾರೆ. 75 ವರ್ಷಗಳಿಂದ ಪಾಕ್ನಲ್ಲಿ ವಾಸಿಸುತ್ತಿದ್ದ ಇವರು ಇದೀಗ ಭಾರತದಲ್ಲಿರುವ ತಮ್ಮ ಕುಟುಂಬವನ್ನು ಸೇರಿಕೊಂಡಿದ್ದಾರೆ.
1947 ರ ವಿಭಜನೆಯ ಸಮಯದಲ್ಲಿ ಬೀಬಿ ಮುಮ್ತಾಜ್ ಅವರು ಚಿಕ್ಕ ಹುಡುಗಿಯಾಗಿದ್ದರು. ದೇಶ ವಿಭಜನೆಯ ಗಲಾಟೆಯಲ್ಲಿ ಈಕೆ ತನ್ನ ತಾಯಿಯನ್ನು ಕಳೆದುಕೊಂಡು ಶವದ ಮುಂದೆ ಕುಳಿತು ಅಳುತ್ತಿದ್ದರಂತೆ. ಈ ವೇಳೆ ಪಾಕಿಸ್ತಾನಿ ಮುಸ್ಲಿಂ ದಂಪತಿಯೊಬ್ಬರು ಮಗುವನ್ನು ಕಂಡು ಮರುಗಿ ಅವರೊಂದಿಗೆ ಕರೆದುಕೊಂಡು ಹೋಗಿದ್ದರು. ಅಲ್ಲದೇ, ಮುಸ್ಲಿಂ ದಂಪತಿಯಾದ ಮುಹಮ್ಮದ್ ಇಕ್ಬಾಲ್ ಮತ್ತು ಅವರ ಪತ್ನಿ ಅಲ್ಲಾ ರಾಖಿ ಮಗುವನ್ನು ದತ್ತು ಪಡೆದುಕೊಂಡು, ಮುಮ್ತಾಜ್ ಎಂದು ಹೆಸರಿಟ್ಟಿದ್ದರು.
ಕುಟುಂಬಕ್ಕಾಗಿ 75 ವರ್ಷ ಶೋಧ: ಬೀಬಿ ಮುಮ್ತಾಜ್ ಅವರ ತಂದೆ ಅನಾರೋಗ್ಯದಿಂದ ಬಳಲುತ್ತಿದ್ದಾಗ, ಆಕೆಯನ್ನು ಮುಸ್ಲಿಂ ದಂಪತಿ ದತ್ತು ಪಡೆದಿದ್ದರು. ಸಿಖ್ ಪರಿವಾರಕ್ಕೆ ಸೇರಿದವಳು, ಆಕೆಯ ಕುಟುಂಬ ಭಾರತದ ಪೂರ್ವ ಪಂಜಾಬ್ನಲ್ಲಿ ನೆಲೆಸಿದೆ ಎಂಬುದರ ಬಗ್ಗೆ ಹೇಳಿದ್ದರು. ಇದಾದ ಬಳಿಕ ಮುಮ್ತಾಜ್ ತನ್ನ ಕುಟುಂಬಕ್ಕಾಗಿ ದಿನವೂ ಹುಡುಕಾಟ ನಡೆಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಕುಟುಂಬ ಸದಸ್ಯರ ಪತ್ತೆಗಾಗಿ ಶೋಧ ನಡೆಸುತ್ತಿದ್ದರು.
ಹೀಗೆ ಸೋಷಿಯಲ್ ಮೀಡಿಯಾದಲ್ಲಿ ಹುಡುಕಾಟ ನಡೆಸುತ್ತಿದ್ದಾಗ ಮುಮ್ತಾಜ್ ಅವರು ತಮ್ಮ ಸಿಖ್ ಕುಟುಂಬವನ್ನು ಪಟಿಯಾಲದ ಪಟ್ರಾನ್ ಶುತ್ರಾನ್ ಗ್ರಾಮದ ನಿವಾಸಿಗಳು ಎಂಬುದನ್ನು ಕಂಡುಕೊಂಡಿದ್ದಾರೆ. ಇವರಿಗೆ ಗುರ್ಮೀತ್ ಸಿಂಗ್, ನರಿಂದರ್ ಸಿಂಗ್ ಮತ್ತು ಅಮರಿಂದರ್ ಸಿಂಗ್ ಎಂಬ ಮೂವರು ಸಹೋದರರಿದ್ದಾರೆ.
ಕುಟುಂಬಸ್ಥರ ಕೂಡಿಕೊಂಡ ವೃದ್ಧ ಜೀವ: ತಮ್ಮ ಕುಟುಂಬ ಭಾರತದ ಪೂರ್ವ ಪಂಜಾಬ್ನಲ್ಲಿ ಇದ್ದುದನ್ನು ತಿಳಿದುಕೊಂಡ ಬಳಿಕ ಮುಮ್ತಾಜ್ ಅವರು ಬರೋಬ್ಬರಿ 75 ವರ್ಷಗಳ ಕಾಯುವಿಕೆಯಿಂದ ಮುಕ್ತಿ ಪಡೆದಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಕುಟುಂಬಸ್ಥರ ಗುರುತಿನ ಬಳಿಕ ಅವರು ತಮ್ಮ ಕುಟುಂಬವನ್ನು ಶ್ರೀ ಕರ್ತಾರ್ಪುರ್ ಸಾಹಿಬ್ನಲ್ಲಿ ಭೇಟಿ ಮಾಡಲು ನಿರ್ಧರಿಸಿದರು.
ಭಾರತ-ಪಾಕಿಸ್ತಾನದ ಎರಡು ಕುಟುಂಬಗಳು ಒಂದಾಗಲು ಇದ್ದ ಕಾನೂನು ದಾಖಲೆಗಳನ್ನು ನೀಡಿದ ಬಳಿಕ ಅಂತಿಮವಾಗಿ ಪಾಕಿಸ್ತಾನದಲ್ಲಿ ಮುಮ್ತಾಜ್ ಅವರು ಮತ್ತು ಭಾರತದಲ್ಲಿದ್ದ ಅವರ ಮೂವರು ಸಹೋದರರು ಭೇಟಿಯಾದರು. ತನ್ನ ಕುಟುಂಬವನ್ನು ಮತ್ತೆ ಸೇರುತ್ತೇನೆ ಎಂದು ಊಹಿಸಿರಲಿಲ್ಲ. ಇದೊಂದು ಅದ್ಭುತ ಕ್ಷಣ ಎಂದು ಮುಮ್ತಾಜ್ ಮತ್ತು ಅವರ ಸಹೋದರರು ಕಣ್ಣೀರಾಗಿದ್ದಾರೆ.
ಓದಿ: ಕಾವು ಪಡೆದ ವಿವಾದ: ಔರಂಗಜೇಬ್ ಸಮಾಧಿ ವೀಕ್ಷಣೆಗೆ ಐದು ದಿನಗಳ ಕಾಲ ನಿರ್ಬಂಧ