ವಿಶಾಖಪಟ್ಟಣಂ(ಆಂಧ್ರಪ್ರದೇಶ): ನಿವೃತ್ತ ಶಿಕ್ಷಕರೊಬ್ಬರು 98 ನೇ ಬಾರಿ ರಕ್ತದಾನ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ.
ರಕ್ತದಾನ ಮಾಡುತ್ತಿರುವ ದಾನಿಯ ಹೆಸರು ವಿಶಾಖಪಟ್ಟಣಂನ ಪಿಲ್ಲಾ ರಮಣಮೂರ್ತಿ. ಮಾರಣಾಂತಿಕ ಪರಿಸ್ಥಿತಿಯಲ್ಲಿರುವವರಿಗೆ ರಕ್ತದಾನ ಮಾಡುವ ಮೂಲಕ ಪ್ರತಿಯೊಬ್ಬರಿಗೂ ಕೂಡ ಜೀವ ಉಳಿಸಲು ಅವಕಾಶವಿದೆ ಎಂದು ಅವರು ನಂಬುತ್ತಾರೆ. ಆ ನಂಬಿಕೆಯೇ ಅವರನ್ನು ಮತ್ತೆ ಮತ್ತೆ ರಕ್ತದಾನ ಮಾಡಲು ಪ್ರೇರೇಪಿಸಿದೆಯಂತೆ.
ವಿದ್ಯಾರ್ಥಿಗಳಿಗೆ ಪಾಠಗಳ ಹೊರತಾಗಿ, ಸಮಾಜದ ಬಗೆಗಿನ ತಮ್ಮ ಕರ್ತವ್ಯಗಳನ್ನು ಪೂರೈಸುವಲ್ಲಿ ರಮಣಮೂರ್ತಿ ಎಲ್ಲರಿಗಿಂತ ಭಿನ್ನವಾಗಿ ಕಂಡು ಬರುತ್ತಾರೆ. ರಾಷ್ಟ್ರೀಯ ಯುವ ದಿನಾಚರಣೆ, ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ, ರೋಟರಿ ಬ್ಲಡ್ ಬ್ಯಾಂಕ್, ರೆಡ್ ಕ್ರಾಸ್ ಹೀಗೆ ಹಲವಾರು ಸಂಘ ಸಂಸ್ಥೆಗಳ ಮೂಲಕ ರಕ್ತದಾನ ಮಾಡುತ್ತಾ ಬಂದಿದ್ದಾರೆ.
ಬಿ.ವಿ.ಕೆ ಕಾಲೇಜಿನಲ್ಲಿ ಸಂಸ್ಕೃತ ಶಿಕ್ಷಕರಾಗಿ ಸೇವೆ ಸಲ್ಲಿಸಿರುವ ಇವರು ಇತ್ತೀಚೆಗಷ್ಟೇ 98 ನೇ ಬಾರಿಗೆ ರಕ್ತದಾನ ಮಾಡಿದ್ದಾರೆ. ನಿಯಮಿತ ದೈಹಿಕ ವ್ಯಾಯಾಮ ಮತ್ತು ನಿಯಮಿತ ಆಹಾರ ಪದ್ಧತಿಯಿಂದ ಇದು ಸಾಧ್ಯ ಎಂದು ಸಂತಸದಿಂದ ಹೇಳುತ್ತಾರೆ.
ಈಗಾಗಲೇ 100 ನೇ ಬಾರಿಗೆ ರಕ್ತದಾನ ಮಾಡಬೇಕಾಗಿತ್ತು. ಆದರೆ, ಕೋವಿಡ್ ಕಾರಣದಿಂದಾಗಿ ಸ್ವಲ್ಪ ತಡವಾಯಿತು ಎಂದು ಹೇಳುವ ಅವರು, ಅಂಗವಿಕಲರಿಗೆ ಉಪಕರಣಗಳನ್ನು ಒದಗಿಸುವಂತಹ ಸಾಮಾಜಕ ಮಾನವೀಯ ಸೇವಾ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ.