ಸಗರ್ (ಮಧ್ಯಪ್ರದೇಶ): 39 ಶಾಲಾ ವಿದ್ಯಾರ್ಥಿಗಳಿಗೆ ಒಂದೇ ಸಿರಿಂಜ್ ಬಳಸಿ ಕೋವಿಡ್-19 ಲಸಿಕೆ ನೀಡಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚಿ ಬಂಧಿಸಲಾಗಿದ್ದು, ಜಿಲ್ಲಾ ಲಸಿಕಾ ಅಧಿಕಾರಿಯನ್ನು ಸಸ್ಪೆಂಡ್ ಮಾಡಲಾಗಿದೆ.
ನಗರದ ಜೈನ್ ಹೈಯರ್ ಸೆಕೆಂಡರಿ ಸ್ಕೂಲ್ನಲ್ಲಿ ಏರ್ಪಡಿಸಲಾಗಿದ್ದ ಮೆಗಾ ಲಸಿಕಾ ಮೇಳದಲ್ಲಿ 39 ವಿದ್ಯಾರ್ಥಿಗಳಿಗೆ ಒಂದೇ ಸಿರಿಂಜ್ ಬಳಸಿ ಲಸಿಕೆ ನೀಡಿದ ಘಟನೆ ನಡೆದಿತ್ತು. ಈ ಬಗ್ಗೆ ಪಾಲಕರು ಆಕ್ಷೇಪವೆತ್ತಿದ ನಂತರ, ಲಸಿಕೆ ನೀಡಿದ ವ್ಯಕ್ತಿಯ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಜಿತೇಂದ್ರ ಅಹಿರ್ವಾರ್ ಎಂಬಾತನೇ ಒಂದೇ ಸಿರಿಂಜ್ ಬಳಸಿ ಹಲವಾರು ಮಕ್ಕಳಿಗೆ ಲಸಿಕೆ ನೀಡಿದ ಆರೋಪಿ.
ಅಹಿರ್ವಾರ್ ಸ್ಥಳೀಯ ಖಾಸಗಿ ನರ್ಸಿಂಗ್ ಕಾಲೇಜೊಂದರ ವಿದ್ಯಾರ್ಥಿಯಾಗಿದ್ದು, ಜಿಲ್ಲಾ ಆರೋಗ್ಯ ಇಲಾಖೆಯಿಂದ ಈತನಿಗೆ ಲಸಿಕೆ ನೀಡುವ ಟ್ರೇನಿಂಗ್ ನೀಡಲಾಗಿತ್ತು ಎಂದು ಸಗರ್ ಜಿಲ್ಲೆಯ ಮುಖ್ಯ ಆರೋಗ್ಯ ಮತ್ತು ವೈದ್ಯಾಧಿಕಾರಿ ಡಾ. ಡಿಕೆ ಗೋಸ್ವಾಮಿ ಹೇಳಿದ್ದಾರೆ.
ಈ ಮಧ್ಯೆ ಬಂಧಿತ ವ್ಯಾಕ್ಸಿನ್ ನೀಡಿದ ಆರೋಪಿ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಆತನ ವಿಭಾಗ ಮುಖ್ಯಸ್ಥರು (HOD) ಆತನನ್ನು ಕಾರಿನಲ್ಲಿ ಶಾಲೆಯವರೆಗೆ ಕರೆದುಕೊಂಡು ಬಂದು ಒಂದೇ ಸಿರಿಂಜ್ನಲ್ಲೇ ಎಲ್ಲರಿಗೂ ಲಸಿಕೆ ನೀಡುವಂತೆ ತಿಳಿಸಿದ್ದರು ಎಂದು ವಿಡಿಯೋದಲ್ಲಿ ಆಪಾದನೆ ಮಾಡಿದ್ದಾನೆ. ಈ ಬಗ್ಗೆ ಮಾಹಿತಿ ನೀಡಿದ ಆರೋಗ್ಯ ಮತ್ತು ವೈದ್ಯಾಧಿಕಾರಿ ಡಾ. ಡಿಕೆ ಗೋಸ್ವಾಮಿ, ಇದು ಸದ್ಯ ತನಿಖೆಯ ವಿಷಯವಾಗಿದ್ದು, ಘಟನೆಗೆ ಕಾರಣರಾದ ಜಿಲ್ಲಾ ಲಸಿಕಾ ಅಧಿಕಾರಿಯನ್ನು ಸಸ್ಪೆಂಡ್ ಮಾಡಲಾಗಿದೆ ಎಂದರು.
ಏತನ್ಮಧ್ಯೆ ಆರೋಪಿ ಅಹಿರ್ವಾರ್ನನ್ನು ಸಗರ್ ನಗರದಲ್ಲೇ ಬಂಧಿಸಿರುವ ಪೊಲೀಸರು, ಆತನನ್ನು ಜೈಲಿಗೆ ಕಳುಹಿಸಿದ್ದಾರೆ ಎಂದು ಗೋಪಾಲ್ ಗಂಜ್ ಪೊಲೀಸ್ ಸ್ಟೇಷನ್ ಮುಖ್ಯ ತನಿಖಾಧಿಕಾರಿ ಕಮಲ್ ಸಿಂಗ್ ಠಾಕೂರ್ ತಿಳಿಸಿದ್ದಾರೆ.