ಛೋಟಾ ಉದೇಪುರ(ಗುಜರಾತ್): ಗ್ರಾಮ ಪಂಚಾಯ್ತಿ ಅಧ್ಯಕ್ಷೆಯಾಗುವ ಮೂಲಕ ಗ್ರಾಮೀಣ ಜನರ ಸೇವೆ ಮಾಡಲು ನಿರ್ಧರಿಸಿರುವ ರೂಪದರ್ಶಿ ಹಾಗೂ ನಟಿ ಇದೀಗ ಅದೃಷ್ಟ ಪರೀಕ್ಷೆಗಾಗಿ ಚುನಾವಣಾ ಕಣಕ್ಕಿಳಿದಿದ್ದಾರೆ. ಛೋಟಾ ಉದೇಪುರದ ಸಂಖೇಡಾದ ಪಂಚಾಯ್ತಿ ಸರಪಂಚ್ ಸ್ಥಾನದ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ.
34 ವರ್ಷದ ಆಶ್ರಾ ಪಟೇಲ್ ಕೋವಿಡ್-19 ಲಾಕ್ಡೌನ್ ಸಂದರ್ಭದಲ್ಲಿ ತಮ್ಮ ಹಳ್ಳಿಯ ಮನೆಯಲ್ಲಿ ದಿನ ಕಳೆದಿದ್ದು, ಈ ವೇಳೆ ಗ್ರಾಮದ ಜನರು ಯಾವೆಲ್ಲ ತೊಂದರೆ ಅನುಭವಿಸುತ್ತಿದ್ದಾರೆಂಬುದರ ಬಗ್ಗೆ ಅರಿತುಕೊಂಡಿದ್ದಾರೆ. ಹೀಗಾಗಿ, ಗ್ರಾಮಸ್ಥರ ಸೇವೆ ಹಾಗೂ ಅವರ ಹಕ್ಕುಗಳಿಗಾಗಿ ದುಡಿಯಲು ಈ ನಿರ್ಧಾರ ಕೈಗೊಂಡಿದ್ದಾಗಿ ತಿಳಿಸಿದ್ದಾರೆ.
ಚುನಾವಣೆಯಲ್ಲಿ ಗೆಲ್ಲುವ ಅನೇಕರು ತಮ್ಮ ಜೇಬು ತುಂಬಿಸಿಕೊಳ್ಳುವ ಕೆಲಸದಲ್ಲಿ ಬ್ಯುಸಿಯಾಗುತ್ತಾರೆ. ಸರ್ಕಾರದ ಯಾವುದೇ ಯೋಜನೆ ಜನರಿಗೆ ತಲುಪಿಸುವುದಿಲ್ಲ. ಹಳ್ಳಿಯಲ್ಲಿ ಶಾಲೆ, ಸಾರಿಗೆ, ಆರೋಗ್ಯ ಸೇವೆಯ ಕೊರತೆಯಿಂದೆ. ಕೋವಿಡ್ ಸಾಂಕ್ರಾಮಿಕ ಸಂಧರ್ಭದಲ್ಲಿ ಜನರ ಸಹಾಯಕ್ಕೆ ಯಾರು ಬಂದಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿರಿ: ಪವರ್ ಸ್ಟಾರ್ ನೆನೆದು ಭಾವುಕರಾದ ಶಿವರಾಜ್ ಕುಮಾರ್, ಕ್ರೇಜಿಸ್ಟಾರ್ ರವಿಚಂದ್ರನ್!
2010ರಲ್ಲಿ ಮಿಸ್ ಇಂಡಿಯಾ ಫೈನಲಿಸ್ಟ್ ಆಗಿದ್ದ ಆಶ್ರಾ, ರೈತ ಕುಟುಂಬದಲ್ಲಿ ಬೆಳೆದವರು. ಇವರ ತಂದೆ ನರಹರಿ 1989ರಿಂದ 1994 ಮತ್ತು 2012 ರಿಂದ 2017ರವರೆಗೆ ಗ್ರಾಮದಲ್ಲಿ ಸರಪಂಚ್ ಆಗಿ ಸೇವೆ ಸಲ್ಲಿಸಿದ್ದಾರೆ. ಆಶ್ರಾ ಮಾತ್ರ ತಮ್ಮ 17ನೇ ವಯಸ್ಸಿನಿಂದಲೂ ಮುಂಬೈನಲ್ಲೇ ವಾಸವಾಗಿದ್ದು, ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚಿದ್ದಾರೆ. ಆದರೆ, ಕೋವಿಡ್ನಿಂದಾಗಿ ಮನೆಯಲ್ಲಿ ಉಳಿದುಕೊಂಡಿದ್ದ ಅವರು, ಗ್ರಾಮಸ್ಥರ ಸಮಸ್ಯೆಗಳ ಬಗ್ಗೆ ತಿಳಿದುಕೊಂಡಿದ್ದಾರೆ. ಇದೀಗ ಗ್ರಾಮಸ್ಥರ ಕೋರಿಕೆ ಮೇರೆಗೆ ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ನಿರ್ಧರಿಸಿದ್ದಾರೆ.
ಈ ವಿಚಾರವಾಗಿ ಮಾತನಾಡಿರುವ ಮಾಡೆಲ್, ಗ್ರಾಮೀಣ ಜನರ ಜೀವನದ ಬಗ್ಗೆ ನನಗೆ ಆಸಕ್ತಿ ಇದೆ. ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತೆ ಕೇಳಿಕೊಂಡಿದ್ದರಿಂದ ನಾನು ಈ ನಿರ್ಧಾರ ಕೈಗೊಂಡಿದ್ದೇನೆ. ಜನರ ಹಕ್ಕು ಅವರಿಗೆ ತಲುಪಿಸುವ ಉದ್ದೇಶದಿಂದ ದುಡಿಯಲಿದ್ದೇನೆ ಎಂದಿದ್ದಾರೆ.