ವಿಶಾಖಪಟ್ಟಣ (ಆಂಧ್ರ ಪ್ರದೇಶ): ಪ್ರೀತಿ ಮಾಯೆ ಹುಷಾರು ಎಂಬ ಮಾತೊಂದಿದೆ. ಪ್ರೀತಿಯ ಬಲೆಗೆ ಬಿದ್ದವರು ಮತ್ತು ಹದಿಹರೆಯದವರನ್ನು ಉದ್ದೇಶಿಸಿ ಹೆಚ್ಚಾಗಿ ಈ ಮಾತನ್ನು ಬಳಕೆ ಮಾಡಲಾಗುತ್ತದೆ. ಪ್ರೀತಿಯಲ್ಲಿ ಬಿದ್ದ ಬಹುತೇಕರೂ ಈ ಮಾತನ್ನು ಕೇಳಿಯೇ ಇರುತ್ತಾರೆ. ಈ ಮಾತಿನ ವಿಷಯ ಹೀಗ್ಯಾಕೆ ಎಂದರೆ?. ಇಲ್ಲೊಂದು ಹುಡುಗಿ ಪ್ರೀತಿಯ ಮಾಯೆಗೆ ಸಿಲುಕಿ ತನ್ನ ಹೆತ್ತ ತಂದೆಯನ್ನೇ ಕೊಲೆ ಮಾಡಲು ಯತ್ನಿಸಿದ್ದಾಳೆ. ಆದರೆ, ಆ ತಂದೆಯು ಅದೃಷ್ಟ ಚೆನ್ನಾಗಿರುವ ಕಾರಣಕ್ಕೆ ಮಗಳ ಕೈಯಿಂದ ಅವರು ಪಾರಾಗಿದ್ದಾರೆ.
ಹೌದು, ಪ್ರೇಮದ ಬಲೆಗೆ ಬಿದ್ದಿದ್ದ 17 ವರ್ಷದ ಬಾಲಕಿ ತನ್ನ ಹೆತ್ತ ತಂದೆ ಎಂಬ ಕಿಂಚಿತ್ತೂ ಪರಿಜ್ಞಾನವಿಲ್ಲದೇ ಹತ್ಯೆಗೆ ಮುಂದಾಗಿದ್ದ ಘಟನೆ ಆಂಧ್ರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ವಿಶಾಖಪಟ್ಟಣ ಜಿಲ್ಲೆಯಲ್ಲಿ ಬಾಲಕಿಯೊಬ್ಬಳು ತನ್ನ ತಂದೆ ಮಲಗಿದ್ದಾಗ ಕುತ್ತಿಗೆಗೆ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದ್ದಾಳೆ. ಅದೃಷ್ಟವಶಾತ್ ಶಬ್ದ ಕೇಳಿ ಎಚ್ಚರಗೊಂಡ ತಂದೆಯ ಪ್ರಾಣಾಪಾಯದಿಂದ ಬಚಾವ್ ಆಗಿದ್ದಾರೆ. ತಂದೆಯ ಕೊಲೆಗೆ ಯತ್ನಿಸಿದ ಪಾಪಿ ಮಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರೇಮಿಯ ಮಾತು ಕೇಳಿ ತಂದೆ ಕೊಲೆ ಸಂಚು: ಇಲ್ಲಿನ ಅಕ್ಕಯಪಾಲೆಂನ ಶಂಕರಮಠ ಪ್ರದೇಶದಲ್ಲಿ ವಾಸಿಸುತ್ತಿರುವ ವ್ಯಕ್ತಿಯೊಬ್ಬರು ಅಡುಗೆ ಮಾಡುವ ಕೆಲಸ ಮಾಡಿಕೊಂಡು ಕುಟುಂಬವನ್ನು ಪೋಷಿಸುತ್ತಿದ್ದಾರೆ. ಈ ವ್ಯಕ್ತಿಗೆ ಓರ್ವ ಮಗ ಮತ್ತು ಒಬ್ಬ ಮಗಳು ಇದ್ದಾಳೆ. 17 ವರ್ಷದ ಮಗಳು ಕಾಲೇಜೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ಆದರೆ, ಶುಕ್ರವಾರ ರಾತ್ರಿ ಈ ಬಾಲಕಿ ಅಡುಗೆ ಮನೆಯಲ್ಲಿದ್ದ ಚಾಕು ತೆಗೆದುಕೊಂಡು ಬಂದು ತಂದೆಯ ಕುತ್ತಿಗೆಗೆ ಇರಿದು ಕೊಲೆ ಮಾಡಲು ಯತ್ನಿಸಿದ್ದಾಳೆ.
ಈ ವೇಳೆ ಏನೋ ಶಬ್ದವಾಗಿ ತಂದೆಗೆ ಎಚ್ಚರವಾಗಿ ಪಕ್ಕಕ್ಕೆ ಸರಿದುಕೊಂಡಿದ್ದಾರೆ. ಇದರಿಂದ ಬೆನ್ನಿಗೆ ಚಾಕು ತಗುಲಿ ಗಾಯವಾಗಿದೆ. ಮಗಳ ಈ ಕೃತ್ಯದಿಂದ ಬೆಚ್ಚಿಬಿದ್ದ ತಂದೆ ಮರು ದಿನ ಎಂದರೆ ಶನಿವಾರ ಬೆಳಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ತಂದೆಯ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೇ, ಈಗಾಗಲೇ ಆರೋಪಿ ಬಾಲಕಿಯನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ. ಪ್ರೇಮ ಬಲೆಯ ಬಿದ್ದದ್ದ ಈ ಬಾಲಕಿ ತನ್ನ ಪ್ರೇಮಿಯ ಮಾತು ಕೇಳಿ ತಂದೆ ಕೊಲೆಗೆ ಮುಂದಾಗಿದ್ದಳು ಎಂದು ತಿಳಿದು ಬಂದಿದೆ.
ಪ್ರೇಮಿಗೆ 2 ಲಕ್ಷ ನಗದು, ಆಭರಣ ನೀಡಿದ್ದ ಬಾಲಕಿ: ಕಾಲೇಜಿಗೆ ಹೋಗುತ್ತಿದ್ದಈ ಬಾಲಕಿಗೆ ತನ್ನದೇ ವಯಸ್ಸಿನ ಬಾಲಕನ ಪರಿಚಯವಾಗಿತ್ತು. ನಂತರ ಇದು ಇಬ್ಬರ ನಡುವೆ ಪ್ರೇಮಕ್ಕೂ ಕಾರಣವಾಗಿದ್ದು, ಬಾಲಕ ಇಬ್ಬರು ಮದುವೆ ಆಗೋಣ ಎಂದು ನಂಬಿಸಲು ಆರಂಭಿಸಿದ್ದಾನೆ. ಇದರ ನಡುವೆ ಬಾಲಕಿಯಿಂದ ಪ್ರಿಯಕರ ಹಣವನ್ನೂ ವಸೂಲಿ ಮಾಡಲು ಶುರು ಮಾಡಿದ್ದಾನೆ. ಪ್ರೇಮದ ಬಲೆಗೆ ಬಿದ್ದ ಬಾಲಕಿ ತನ್ನ ಮನೆಯಲ್ಲಿದ್ದ ಎರಡು ಲಕ್ಷ ರೂಪಾಯಿ ನಗದು ಹಾಗೂ ಎಂಟು ತೊಲೆ ಬಂಗಾರದ ಆಭರಣಗಳನ್ನು ತಂದು ತನ್ನ ಪ್ರೇಮಿಗೆ ನೀಡಿದ್ದಾಳೆ.
ಈ ವಿಷಯ ಬಾಲಕಿಯ ತಂದೆಗೆ ಗೊತ್ತಾಗಿದೆ. ಇಷ್ಟೊಂದು ಹಣ ಮತ್ತು ಚಿನ್ನಾಭರಣವನ್ನು ಕೊಟ್ಟಿರುವ ಕೆಲವು ವಾರಗಳಿಂದ ತಂದೆ ಮತ್ತು ಮಗಳ ನಡುವೆ ಜಗಳ ಆರಂಭವಾಗಿದೆ. ಇದನ್ನು ತನ್ನ ಪ್ರಿಯಕರನಿಗೆ ಬಾಲಕಿ ಬಂದು ಹೇಳಿದ್ದಾಳೆ. ಆಗ ಆ ಪ್ರೇಮಿ ನನ್ನ ಬಳಿ ಹಣವಿಲ್ಲ. ನೀನೇ ಏನಾದರೂ ಮಾಡುವಂತೆ ಸೂಚಿಸಿದ್ದಾನೆ ಎಂದು ತನ್ನ ಗೆಳತಿಗೆ ಹೇಳಿದ್ದಾನೆ. ಇದೇ ಮಾತಿನಿಂದ ಬಾಲಕಿಯ ತನ್ನ ತಂದೆಯ ಯತ್ನಿಸಿದ್ದಳು ಎಂಬುವುದಾಗಿ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ ಎಂದು ಸರ್ಕಲ್ ಇನ್ಸ್ಪೆಕ್ಟರ್ ಶ್ರೀನಿವಾಸ ರಾವ್ ಮಾಹಿತಿ ನೀಡಿದ್ದಾರೆ.
ವಂಚಿಸಿ ಹಣ ವಸೂಲಿ ಎಂದು ಬಾಲಕಿ ದೂರು: ಮತ್ತೊಂದೆಡೆ ಪ್ರಿಯಕರ ತನ್ನನ್ನು ವಂಚಿಸಿ ಹಣ ಮತ್ತು ಚಿನ್ನಾಭರಣ ವಸೂಲಿ ಮಾಡಿದ್ದಾನೆ ಎಂದು ಬಾಲಕಿ ಪೊಲೀಸರಿಗೆ ದೂರು ನೀಡಿದ್ದಾಳೆ. ಈ ಕುರಿತ ಸಹ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಇನ್ನೊಂದೆಡೆ, ಬಾಲಕನಿಗೆ ಬೇರೊಬ್ಬ ಬಾಲಕಿ ಜೊತೆಗೂ ಪ್ರೇಮ ಸಂಬಂಧ ಇದೆ. ಆಕೆಯ ಪ್ರಚೋದನೆಯ ಮೇರೆಗೆ ಬಾಲಕಿ ಹಣ ಮತ್ತು ಚಿನ್ನವನ್ನು ಬಾಲಕನಿಗೆ ನೀಡಿದ್ದಳು ಎಂದು ಸಂಬಂಧಿಕರು ಆರೋಪಿಸಿದ್ಧಾರೆ.
ಇದನ್ನೂ ಓದಿ: ಲವ್ ಫ್ಲಾಪ್ ಆಯ್ತು ಅಂತಾ ಕೈ ರಕ್ತ ಮಾಡಿಕೊಂಡವರು.. 4 ವರ್ಷದಲ್ಲಿ 215 ಕೊಲೆಗಳು ಪ್ರೀತಿ ವಿಚಾರಕ್ಕೆ ಆಗಿರೋದು!