ಪುಣೆ(ಮಹಾರಾಷ್ಟ್ರ): 11 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಆಕೆಯ ತಂದೆ, ಚಿಕ್ಕಪ್ಪ, ಅಜ್ಜ ಮತ್ತು ಒಡಹುಟ್ಟಿದ ಸಹೋದರ ನಿರಂತರವಾಗಿ ಅತ್ಯಾಚಾರವೆಸಗಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ಬೆಳಕಿಗೆ ಬಂದಿದೆ. ಇದು ಇಡೀ ಮಾನವ ಕುಲವೇ ತಲೆತಗ್ಗಿಸುವಂತಹ ಹೇಯ ಕೃತ್ಯವಾಗಿದೆ.
ಪುಣೆಯ ತಡಿವಾಲಾ ರಸ್ತೆಯ ಬಂಡ್ ಗಾರ್ಡನ್ ಪ್ರದೇಶದಲ್ಲಿ ನಡೆದಿದ್ದು, ಕೇವಲ 11 ವರ್ಷದ ಬಾಲಕಿ ದುಷ್ಕೃತ್ಯಗೊಳಗಾಗಿದ್ದಾಳೆ. ಕಳೆದ ಆರು ವರ್ಷಗಳಿಂದ ನಿರಂತರವಾಗಿ ಈಕೆಯ ಮೇಲೆ ಕೃತ್ಯ ಎಸಗಲಾಗಿದೆ ಎಂದು ಪ್ರಕರಣದಿಂದ ತಿಳಿದು ಬಂದಿದೆ.
11 ವರ್ಷದ ಬಾಲಕಿ ಕೋರೆಗಾಂವ್ ಪ್ರದೇಶದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದುತ್ತಿದ್ದು, ಮಕ್ಕಳಿಗೆ ತರಗತಿಯಲ್ಲಿ ಕೌನ್ಸಿಲಿಂಗ್ ಚಟುವಟಿಕೆ ಅಂಗವಾಗಿ 'ಗುಡ್ ಟಚ್', 'ಬ್ಯಾಡ್ ಟಚ್' ಬಗ್ಗೆ ಹೇಳಿಕೊಡಲಾಗುತ್ತಿತ್ತು. ಬಾಲಕಿಗೆ ಇದರ ಬಗ್ಗೆ ತಿಳಿ ಹೇಳುತ್ತಿದ್ದಾಗ ಬೆಚ್ಚಿಬಿದ್ದಿದ್ದಾಳೆ. ತನ್ನ ಮೇಲೆ ಈವರೆಗೆ ನಡೆದ ದೌರ್ಜನ್ಯದ ಬಗ್ಗೆ ಬಾಯ್ಬಿಟ್ಟಿದ್ದಾಳೆ. ಇದರ ಬೆನ್ನಲ್ಲೇ ಶಿಕ್ಷಕರು ಬಂಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಮಗುವನ್ನ ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ತನ್ನ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಹೇಳಿಕೊಂಡಿದ್ದಾಳೆ.
ಇದನ್ನೂ ಓದಿ: ಯೋಗಿ ಆದಿತ್ಯನಾಥ್ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಪಿಎಂ ಮೋದಿ.. ವಿರೋಧ ಪಕ್ಷದವರು?
ಸಂತ್ರಸ್ತೆಯ ತಂದೆ, ಸಹೋದರ, ಅಜ್ಜ ಮತ್ತು ಚಿಕ್ಕಪ್ಪನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 2017ರಲ್ಲಿ ಬಾಲಕಿ ತನ್ನ ಕುಟುಂಬದೊಂದಿಗೆ ಬಿಹಾರದಲ್ಲಿ ವಾಸವಾಗಿದ್ದ ವೇಳೆ ಪಾಪಿ ತಂದೆ ಆಕೆಯ ಮೇಲೆ ಬಲವಂತವಾಗಿ ಲೈಂಗಿಕ ಸಂಬಂಧ ಬೆಳೆಸಿದ್ದನು. ಇದಾದ ಬಳಿಕ 2020ರಲ್ಲಿ ಬಾಲಕಿ ಮೇಲೆ ಆಕೆಯ ಸಹೋದರ, 2021ರಲ್ಲಿ ಅಜ್ಜ ಮತ್ತು ಚಿಕ್ಕಪ್ಪ ಸಹ ದುಷ್ಕೃತ್ಯವೆಸಗಿದ್ದಾರೆಂದು ಪೊಲೀಸ್ ಇನ್ಸ್ಪೆಕ್ಟರ್ ಪ್ರತಾಪ್ ಮಾನ್ಕರ್ ತಿಳಿಸಿದ್ದಾರೆ.