ಗಯಾ(ಬಿಹಾರ): ರೈಲು ಭಾರತೀಯ ಸಂಚಾರ ಇಲಾಖೆಯ ಜೀವನಾಡಿ. ಪ್ರತಿದಿನ ಲಕ್ಷಾಂತರು ಜನರು ವಿವಿಧ ಪ್ರದೇಶಗಳಿಗೆ ರೈಲಿನಲ್ಲಿ ಪ್ರಯಾಣ ಬೆಳೆಸುತ್ತಾರೆ. ಹೀಗಾಗಿ, ಬಹುತೇಕ ಎಲ್ಲ ರೈಲಿನ ಬೋಗಿಗಳು ತುಂಬಿ ತುಳುಕುತ್ತಿರುತ್ತವೆ. ರೈಲಿನ ಬೋಗಿಗಳಲ್ಲಿ ಬ್ಯಾಗ್ ಇಡುವ ಸ್ಥಳಗಳಲ್ಲೂ ಹತ್ತಿ ಪ್ರಯಾಣಿಸುತ್ತಾರೆ. ಆದರೆ, ಇಲ್ಲೋರ್ವ ವ್ಯಕ್ತಿ ಒಂದು ಹೆಜ್ಜೆ ಮುಂದೆ ಹೋಗಿದ್ದು, ಸುಮಾರು 190 ಕಿಲೋ ಮೀಟರ್ ದೂರವನ್ನು ರೈಲಿನ ಇಂಜಿನ್ ಕೆಳಗೆ ಕುಳಿತು ಪ್ರಯಾಣಿಸಿದ್ದಾನೆ.
ಬಿಹಾರದ ರಾಜ್ಗಿರ್ನಿಂದ ಗಯಾದವರೆಗೆ ವ್ಯಕ್ತಿ ಇಂಜಿನ್ ಕೆಳಗೆ ಕುಳಿತು ಪ್ರಯಾಣ ಬೆಳೆಸಿದ್ದಾನೆಂದು ರೈಲ್ವೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ವ್ಯಕ್ತಿ ಪ್ರಯಾಣ ಬೆಳೆಸುತ್ತಿರುವುದನ್ನ ರೈಲಿನ ಚಾಲಕ ನೋಡಿ, ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಆತನನ್ನು ಬಂಧಿಸಿರುವ ಸಿಬ್ಬಂದಿ ಬಳಿಕ ಸರಿಯಾದ ಮಾಹಿತಿ ಇಲ್ಲದ ಕಾರಣ ಬಿಟ್ಟು ಕಳುಹಿಸಿದ್ದಾರೆಂದು ಹೇಳಲಾಗ್ತಿದೆ.
ಇದನ್ನೂ ಓದಿ: ಹರಿಣಗಳ ವಿರುದ್ಧ ಟಿ-20 ಫೈಟ್.. ಕೋಚ್ ದ್ರಾವಿಡ್ ನೇತೃತ್ವದಲ್ಲಿ ಟೀಂ ಇಂಡಿಯಾ ಅಭ್ಯಾಸ
ರೈಲ್ವೆ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಬುದ್ಧ ಪೂರ್ಣಿಮಾ ಎಕ್ಸ್ಪ್ರೆಸ್ನಲ್ಲಿ ಸೋಮವಾರ ಮುಂಜಾನೆ 4ಗಂಟೆಗೆ ರಾಜ್ಗಿರ್ನಿಂದ ಪಾಟ್ನಾ ಮೂಲಕ ಗಯಾಕ್ಕೆ ತೆರಳಿದ್ದಾನೆ. ರೈಲು ಗಯಾ ಪ್ಲಾಟ್ಫಾರ್ಮ್ಗೆ ಬರುತ್ತಿದ್ದಂತೆ ಇಂಜಿನ್ ಕೆಳಗಿನಿಂದ ಶಬ್ದ ಬಂದಿದೆ. ಈ ವೇಳೆ ಪರಿಶೀಲನೆ ನಡೆಸಿದಾಗ ವ್ಯಕ್ತಿ ಇರುವುದು ಕಂಡು ಬಂದಿದೆ ಎಂದಿದ್ದಾರೆ. ಆ ಜಾಗಕ್ಕೆ ಪ್ರವೇಶ ಪಡೆದುಕೊಳ್ಳುವುದು ಅಸಾಧ್ಯ. ಆದರೆ, ವ್ಯಕ್ತಿ ಕುಳಿತುಕೊಂಡಿರುವುದು ನಮಗೂ ಆಶ್ಚರ್ಯ ಮೂಡಿಸಿದೆ. ಘಟನೆ ಬೆನ್ನಲ್ಲೇ ಆತನನ್ನು ಬಂಧಿಸಲಾಗಿದ್ದು, ನಂತರ ಆತ ಪರಾರಿಯಾಗಿದ್ದಾನೆಂದು ತಿಳಿಸಿದ್ದಾರೆ.