ಪಶ್ಚಿಮ ಗೋದಾವರಿ(ಆಂಧ್ರ ಪ್ರದೇಶ): ಮೃತಪಟ್ಟ ತಾಯಿಯ ಶವವನ್ನು ಅಂತ್ಯಸಂಸ್ಕಾರ ಮಾಡದೇ ಆಕೆಯ ಮಗ ಸುಮಾರು ಐದು ದಿನಗಳ ಕಾಲ ತನ್ನ ಮನೆಯಲ್ಲಿಯೇ ಇರಿಸಿಕೊಂಡ ಘಟನೆ ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿಯಲ್ಲಿ ನಡೆದಿದೆ.
ಜಂಗಾರೆಡ್ಡಿಗೂಡೆಂನ ಅಪಾರ್ಟ್ಮೆಂಟ್ನಲ್ಲಿ ಘಟನೆ ಸಂಭವಿಸಿದ್ದು, ಮಂಜುಳಾ ದೇವಿ (79) ಅನಾರೋಗ್ಯದ ಕಾರಣದಿಂದ ಕೆಲವು ದಿನಗಳ ಹಿಂದೆ ಮೃತಪಟ್ಟಿದ್ದಳು. ಆಕೆ ಸಾವನ್ನಪ್ಪಿದ ನಂತರ ಆಕೆಯ ಮಗ ರವೀಂದ್ರ ಫಣಿ, ಸುಮಾರು ಐದು ದಿನಗಳ ಕಾಲ ಶವ ಸಂಸ್ಕಾರ ಮಾಡದೇ ಮೃತದೇಹವನ್ನು ಮನೆಯಲ್ಲಿಯೇ ಉಳಿಸಿಕೊಂಡಿದ್ದಾನೆ.
ಇದನ್ನೂ ಓದಿ: ಭೀಕರ ರಸ್ತೆ ಅಪಘಾತ... ಸ್ಥಳದಲ್ಲೇ ನಾಲ್ವರ ದುರ್ಮರಣ
ಅಷ್ಟೂ ದಿನಗಳ ಕಾಲ ಮನೆಯೊಳಗೆ ಯಾರೂ ಪ್ರವೇಶಿಸದಂತೆ ನೋಡಿಕೊಂಡಿದ್ದನು ಎಂದು ತಿಳಿದುಬಂದಿದೆ. ಆದರೆ ಶವ ಕೊಳೆಯಲು ಆರಂಭಿಸಿದ್ದು, ನೆರೆಹೊರೆಯವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ರವೀಂದ್ರ ಫಣಿಯ ವಿರೋಧದ ನಡುವೆಯೂ ಮೃತದೇಹವನ್ನು ಸಾಗಿಸಿ, ಮುನ್ಸಿಪಲ್ ಸಿಬ್ಬಂದಿಯ ಸಹಾಯದಿಂದ ಶವಕ್ಕೆ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ಆತನ ಸಹೋದರಿ ಮೃತಪಟ್ಟಾಗಲೂ ಕೂಡಾ ಶವವನ್ನ ಇದೇ ರೀತಿ ಅಂತ್ಯ ಸಂಸ್ಕಾರ ಮಾಡದೇ ಇಟ್ಟಿದ್ದನೆಂದು ಸ್ಥಳೀಯರು ಹೇಳಿದ್ದಾರೆ.