ನಾಗ್ಪುರ್(ಮಹಾರಾಷ್ಟ್ರ): ಚಿಕ್ಕಪ್ಪ, ಚಿಕ್ಕಮ್ಮ ತನ್ನ ಖಾಸಗಿ ಡೈರಿ ಓದಿದ್ದಕ್ಕಾಗಿ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮಹಾರಾಷ್ಟ್ರದ ನಾಗ್ಪುರ್ದಲ್ಲಿ ಈ ಘಟನೆ ನಡೆದಿದೆ. ಉನ್ನತ ಶಿಕ್ಷಣ ಪಡೆದುಕೊಂಡಿದ್ದ ಯುವತಿ ಈ ನಿರ್ಧಾರ ಕೈಗೊಂಡಿದ್ದಾಳೆ.
ಉದ್ದೇಶಪೂರ್ವಕವಾಗಿ ಚಿಕ್ಕಪ್ಪ ಮತ್ತು ಚಿಕ್ಕಮ್ಮ ನನ್ನ ವೈಯಕ್ತಿಕ ಡೈರಿಯಲ್ಲಿನ ಖಾಸಗಿ ವಿಷಯ ಓದಿದ್ದಾರೆಂದು ಮನನೊಂದು ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಾಗ್ಪುರ್ ಜಿಲ್ಲೆಯ ಸಾವ್ನರ್ ಪೊಲೀಸ್ ಠಾಣಾ ವ್ಯಾಪ್ತಿಯ ಧಾಪೇವಾಡದಲ್ಲಿ ಈ ಘಟನೆ ನಡೆದಿದೆ.
ಆತ್ಮಹತ್ಯೆಗೆ ಶರಣಾಗಿರುವ ಯುವತಿಯನ್ನ ನಿಕಿತಾ ಎಂದು ಗುರುತಿಸಲಾಗಿದೆ. ಸಹೋದರ ಪಂಕಜ್ ನೀಡಿರುವ ದೂರಿನ ಆಧಾರದ ಮೇಲೆ ಪೊಲೀಸರು ಚಿಕ್ಕಪ್ಪ ರತ್ನಾಕರ್ ಮತ್ತು ಚಿಕ್ಕಮ್ಮ ಮಂಗಳಾ ಎಂಬುವವರ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ರತ್ನಾಕರ್ ಕಾಲೇಜ್ವೊಂದರಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡ್ತಿದ್ದಾರೆ.
ನಿಕಿತಾ ಬಾಲ್ಯದಿಂದಲೂ ಡೈರಿ ಬರೆಯುವ ಅಭ್ಯಾಸ ಹೊಂದಿದ್ದಾಳೆ. ಯಾರಿಗೂ ಹೇಳಲಾಗದ ಅನೇಕ ವಿಷಯ ಡೈರಿಯಲ್ಲಿ ಬರೆಯುತ್ತಿದ್ದಳು. ಈ ಮೂಲಕ ಮನಸ್ಸಿನ ಒತ್ತಡ ಕಡಿಮೆ ಮಾಡಿಕೊಳ್ಳುತ್ತಿದ್ದಳು. ಕಳೆದ ಕೆಲ ದಿನಗಳ ಹಿಂದೆ ನಿಕಿತಾ ಸೋದರ ಸಂಬಂಧಿ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಈ ವೇಳೆ ರತ್ನಾಕರ್ ತನ್ನೊಂದಿಗೆ ನಿಕಿತಾಳನ್ನು ಕರೆದೊಯ್ದಿದ್ದರು. ಮನೆಯಲ್ಲಿ ತುಂಬಾ ಕೆಟ್ಟದಾಗಿ ನಡೆಸಿಕೊಂಡಿದ್ದರ ಬಗ್ಗೆ ನಿಕಿತಾ ಡೈರಿಯಲ್ಲಿ ಬರೆದಿದ್ದಳು.
ಇದನ್ನೂ ಓದಿರಿ: ಬೆಂಗಳೂರು ED ಕಚೇರಿ ಮುಂದೆ 'ಕೈ' ಪ್ರತಿಭಟನೆ.. ಎರಡು ಕಾರುಗಳಿಗೆ ಬೆಂಕಿ, 11 ಜನ ಪೊಲೀಸ್ ವಶಕ್ಕೆ
ಚಿಕ್ಕಮ್ಮನ ಬಗ್ಗೆ ಡೈರಿಯಲ್ಲಿ ' ಕುಟುಂಬದ ದೆವ್ವ' ಎಂದು ಬರೆದಿದ್ದಳು. ಇದನ್ನ ಚಿಕ್ಕಮ್ಮ, ಚಿಕ್ಕಪ್ಪ ಸೇರಿಕೊಂಡು ಕದ್ದು ಓದಿದ್ದರು. ಇದರ ಬೆನ್ನಲ್ಲೇ ಯುವತಿಗೆ ಬೆದರಿಕೆ ಸಹ ಹಾಕಿದ್ದರು. ಇದರಿಂದ ಒತ್ತಡಕ್ಕೊಳಗಾಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.