ಹೈದರಾಬಾದ್: ಸರಿಯಾಗಿ ಓದದಿದ್ದರೆ ಮುಂದೆ ಕತ್ತೆ ಕಾಯಾಬೇಕಾಗುತ್ತದೆ ಎಂಬ ಮಾತಗಳನ್ನು ಪೋಷಕರು ಮಕ್ಕಳಿಗೆ ಹೇಳುವುದನ್ನು ನಾವು ಕೇಳಿಯೇ ಇರುತ್ತೇವೆ ಮತ್ತು ನಮ್ಮ ಮೇಲೂ ಈ ಮಾತಿನ ಅಸ್ತ್ರವನ್ನು ಪೋಷಕರು ಒಮ್ಮೆಯಾದರು ಪ್ರಯೋಗಿಸಿಯೇ ಇರುತ್ತಾರೆ. ಆದರೆ, ಇಲ್ಲೊಬ್ಬ ವ್ಯಾಪಾರಿ ಅದೇ ಕತ್ತೆಗಳನ್ನು ಸಾಕಿ ತಿಂಗಳಿಗೆ ಲಕ್ಷಗಟ್ಟಲೆ ಆದಾಯ ಗಳಿಸಬಹುದು ಎಂಬುದನ್ನು ಸಾಬೀತುಪಡಿಸಿದ್ದಾರೆ.
ಹೌದು. ನಾಗರ್ ಕರ್ನೂಲ್ ಜಿಲ್ಲೆಯ ಬಿಜಿನೇಪಲ್ಲಿ ಮಂಡಲದ ನಾಗೇಶ್ ಎಂಬುವವರು ಕತ್ತೆ ಸಾಕಣೆ ಮಾಡಿ ಅದರ ಹಾಲಿನ ವ್ಯಾಪಾರದ ಮೂಲಕ ತಿಂಗಳಿಗೆ ಲಕ್ಷಾಂತರ ರೂ. ಗಳಿಸುತ್ತಿದ್ದಾರೆ. ದೇಶಿಯ ಮಾರುಕಟ್ಟೆ ಸೇರಿದಂತೆ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕತ್ತೆ ಹಾಲಿಗೆ ಉತ್ತಮ ಬೇಡಿಕೆಯಿದ್ದು, ಇದರ ವ್ಯಾಪಾರ ಜೋರಾಗಿಯೇ ಇದೆ. ಆದಾಗ್ಯೂ, ಕತ್ತೆ ಹಾಲನ್ನು ಔಷಧೀಯ ತಯಾರಿಕೆಯಲ್ಲೂ ಬಳಸಲಾಗುತ್ತದೆ. ಅಲ್ಲದೇ ಇದನ್ನು ಅಸ್ತಮ ರೋಗಿಗಳು, ಸೇರಿದಂತೆ ಬಲಹೀನ ಮಕ್ಕಳಿಗೆ ಕುಡಿಸಲಾಗುತ್ತದೆ.
6 ತಿಂಗಳ ವರೆಗೂ ಕೆಡದ ಹಾಲು: ಕತ್ತೆ ಹಾಲಿನ ಮತ್ತೊಂದು ವಿಶೇಷತೆ ಎಂದರೆ ಸರಿಯಾದ ತಾಪಮಾನದಲ್ಲಿ ಶೇಖರಿಸಿಟ್ಟರೆ 6 ತಿಂಗಳವರೆಗೆ ಈ ಹಾಲು ಕೆಡುವುದಿಲ್ಲ. ಹಾಗಾಗಿ ಮಾರುಕಟ್ಟೆಯಲ್ಲಿ ಹಸು ಹಾಲಿನ ಬೆಲೆಗಿಂತಲೂ ಕತ್ತೆ ಹಾಲಿನ ಬೆಲೆ ಹೆಚ್ಚಿದ್ದು, ಲೀಟರ್ಗೆ ರೂ. 1500 ರಿಂದ 2000 ವೆರೆಗೆ ಇದೆ. ಆದರೆ ಬೇಡಿಕೆಗೆ ತಕ್ಕಂತೆ ಹಾಲಿನ ಉತ್ಪಾದನೆ ಇಲ್ಲದ ಕಾರಣ ಕತ್ತೆ ಸಾಕಾಣಿಕೆಗೆ ಬೇಡಿಕೆ ಹೆಚ್ಚಿದೆ. ಕತ್ತೆ ಸಾಕಣಿಕೆ ವ್ಯಾಪಾರವಾಗಿ ಆಯ್ದುಕೊಂಡವರು ಪ್ರಸ್ತುತ ಲಾಭದ ಹಾದಿಯಲ್ಲಿದ್ದಾರೆ. ಇದೆಲ್ಲವನ್ನು ಅರಿತುಕೊಂಡ ನಾಗೇಶ್ ಕತ್ತೆಗಳ ಸಾಕಣೆ ಮಾಡಿ ಯಶಸ್ವಿಯಾಗಿದ್ದಾರೆ.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ನಾಗೇಶ್, ಕತ್ತೆ ಸಾಕಣಿಕೆ ಅಷ್ಟು ಸುಲಭದ ಕೆಲಸವಲ್ಲ. ಇದರ ಬಗ್ಗೆ ಸಾಕಷ್ಟು ಜನರಿಗೆ ತಿಳಿದಿಲ್ಲ. ಈ ವ್ಯಾಪಾರಕ್ಕೆ ಇಳಿಯುವ ಮೊದಲು ಕತ್ತೆಗಳ ಬಗ್ಗೆ ಅರಿತಿರಬೇಕು. ಕತ್ತೆಯಲ್ಲಿ ಎಷ್ಟು ಜಾತಿಗಳಿವೆ?, ಅವುಗಳ ಆಹಾರ ಕ್ರಮವೇನು? ಯಾವ ತಳಿಗಳು ಹಾಲು ಕೊಡುತ್ತವೆ? ಎಂಬುದೆಲ್ಲದರ ಬಗ್ಗೆ ನನ್ನ ಮಗ ಅಖಿಲ್ ಅಧ್ಯಯನ ಮಾಡಿ, ಕೇಂದ್ರ ಸರ್ಕಾರದ ಸಂಸ್ಥೆಯಾದ ಐಸಿಎಂಆರ್‌ನಿಂದ ಕತ್ತೆ ಸಾಕಣೆ ಕುರಿತು ವಿಶೇಷ ತರಬೇತಿ ಪಡೆದು ನಂತರ ಈ ಕ್ಷೇತ್ರಕ್ಕೆ ಕಾಲಿಟ್ಟಿರುವುದಾಗಿ ಹೇಳಿದ್ದಾರೆ.
ನಿರ್ವಹಣೆಯ ಮಾಸಿಕ ವೆಚ್ಚ: ಬಿಜಿನೇಪಲ್ಲಿಯಲ್ಲಿ ಕತ್ತೆ ಹಾಲಿನ ಫಾರ್ಮ್ ಸಹ ಸ್ಥಾಪಿಸಲಾಗಿದೆ. ಎರಡು ಎಕರೆಯಲ್ಲಿ ಶೆಡ್‌ಗಳು, ಬಯಲು ಜಾಗ, ಶೇರಿಂಗ್ ಶೆಡ್‌ಗಳು, ಕಾರ್ಮಿಕರಿಗೆ ಕೊಠಡಿಗಳು ನಿರ್ಮಾಣ ಮಾಡಲಾಗಿದೆ. 10 ಎಕರೆ ಜಮೀನನ್ನು ಕತ್ತೆಗಳ ಮೇಯಿಸಲು ಗುತ್ತಿಗೆ ತೆಗೆದುಕೊಳ್ಳಲಾಗಿದೆ. ಅದರಲ್ಲಿ ಹುಲ್ಲು, ಕಂದಗಡ್ಡೆ ಬಳ್ಳಿ, ಭತ್ತ ಸಹ ಬೆಳೆಯಲಾಗುತ್ತಿದೆ. ಕತ್ತೆಗಳನ್ನು ನೋಡಿಕೊಳ್ಳಲು ಎಂದು ತಮಿಳುನಾಡಿನಿಂದ ವಿಶೇಷ ಕಾರ್ಮಿಕರನ್ನು ಕರೆತರಲಾಗಿದೆ. 80 ಲಕ್ಷ ಖರ್ಚು ಮಾಡಿ 110 ಕತ್ತೆಗಳನ್ನು ಖರೀದಿಸಿದ್ದು, ಹೂಡಿಕೆಯು 20 ಲಕ್ಷದವರೆಗೆ ಇದ್ದರೆ, ನಿರ್ವಹಣೆ ವೆಚ್ಚವು ತಿಂಗಳಿಗೆ 3 ಲಕ್ಷದವರೆಗೆ ಇರುತ್ತದೆ ಎಂದು ನಾಗೇಶ್ ತಿಳಿಸಿದ್ದಾರೆ.
110 ಕತ್ತೆಗಳ ಪೈಕಿ 40 ಗುಜರಾತ್ನ ಹಲಾರಿ, 45 ರಾಜಸ್ಥಾನದ ಕಥಿಯಾವಾಡಿ, 10 ಸ್ಥಳೀಯ ಮತ್ತು 4 ಫ್ರಾನ್ಸ್‌ನ ಪೊಯ್ಟೌ ತಳಿಯ ಕತ್ತೆಗಳು ಸಾಕಾಣಿಕೆ ಮಾಡಲಾಗಿದೆ. ಹಳರಿ ತಳಿಯ ಕತ್ತೆ ದಿನಕ್ಕೆ ಒಂದು ಲೀಟರ್ ಹಾಲು ಕೊಟ್ಟರೆ, ಕಾಠಿವಾಡಿ 3ರಿಂದ 4 ಲೀಟರ್, ಸ್ಥಳೀಯ ಕತ್ತೆಗಳು ಅರ್ಧ ಲೀಟರ್‌ಗಿಂತ ಕಡಿಮೆ ಮತ್ತು ಪೊಯ್ಟೌ ತಳಿಯ ಕತ್ತೆ ದಿನಕ್ಕೆ 2 ಲೀಟರ್ ಹಾಲು ಕೊಡುತ್ತವೆ. 110 ರಲ್ಲಿ 60 ಹಾಲನ್ನು ನೀಡುವ ಕತ್ತೆಗಳಿವೆ. ಅದಕ್ಕೆ ದಿನವು ಆಹಾರವಾಗಿ ಹಸಿರು ಮೇವುಗಳಾದ ಜೋಳದ ಹುಲ್ಲು, ದಶರಥ ಹುಲ್ಲು, ಕಡಲೆ ಸಿಪ್ಪೆ, ತೊಗರಿ, ಗೋಧಿ ಹಿಟ್ಟು, ದನಗಳ ಮೇವು ಸೇರಿದಂತೆ ಸೂಪರ್ ನೇಪಿಯರ್ ಅನ್ನು ನಿಗದಿತ ಸಮಯದಲ್ಲಿ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಇನ್ನು ಫಾರ್ಮ್ ಅನ್ನು ನವೆಂಬರ್ 2022 ರಲ್ಲಿ ಪ್ರಾರಂಭಿಸಲಾಗಿದೆ. ಆರಂಭದಲ್ಲಿ, ತಿಂಗಳಿಗೆ ಕೇವಲ 250 ಲೀಟರ್ ಹಾಲು ಉತ್ಪಾದಿಸಲಾಗುತ್ತಿತ್ತು. ಕ್ರಮೇಣ ಹೆಚ್ಚಿದ್ದು, ಪ್ರಸ್ತುತ ತಿಂಗಳಿಗೆ 550 ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಕತ್ತೆಗಳಿಂದ ತೆಗೆದ ಹಾಲನ್ನು ಶೀತಲ ಯಂತ್ರಗಳಲ್ಲಿ ಶೇಖರಿಸಿಟ್ಟರೆ ಗುತ್ತಿಗೆ ಪಡೆದ ಕಂಪನಿ ಹದಿನೈದು ದಿನಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಖರೀದಿಸಿ ತೆಗೆದುಕೊಂಡು ಹೋಗುತ್ತದೆ. ಮಾಸಿಕ ಆದಾಯ 9 ಲಕ್ಷ ಎಂದು ನಾಗೇಶ್ ಪುತ್ರ ನಿಖಿಲ್ ಬಹಿರಂಗ ಪಡಿಸಿದ್ದಾರೆ.
ಇದನ್ನೂ ಓದಿ: ನಂದಿನಿ ಹಾಲನ್ನೇ ಬಳಸಲು ನಿರ್ಧರಿಸಿದ ಬೆಂಗಳೂರು ಹೊಟೇಲ್ ಸಂಘ