ಸಬರಕಂಠ(ಗುಜರಾತ್): ಹಿಮ್ಮತ್ನಗರದ ಖಾಸಗಿ ಆಸ್ಪತ್ರೆಯಲ್ಲಿ ಅಚ್ಚರಿ ಎಂಬಂತೆ 2 ಮೂಗಿನ ಮಗು ಜನಿಸಿದೆ. ಮುನ್ನೆಚ್ಚರಿಕೆಯಾಗಿ ಮಗುವಿಗೆ ಹೆಚ್ಚಿನ ಚಿಕಿತ್ಸೆ ನೀಡಲು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಸದ್ಯಕ್ಕೆ ಮಗು ಆರೋಗ್ಯವಾಗಿದ್ದು, ಕುಟುಂಬದವರಿಗೆ ಭರವಸೆ ಮೂಡಿದೆ. ವೈದ್ಯಕೀಯ ವರದಿ ಪ್ರಕಾರ ಪ್ರತಿ 8,000 ರಿಂದ 15,000 ಶಿಶುಗಳಲ್ಲಿ ಒಂದು ಮಗು ಈ ರೀತಿ ಜನಿಸುತ್ತದೆ.
ಸದ್ಯಕ್ಕೆ ಮಗುವಿಗೆ ಚಿಕಿತ್ಸೆ ನೀಡಲಾಗುತ್ತದೆ. ಭವಿಷ್ಯದಲ್ಲಿ ಆಪರೇಷನ್ ಮೂಲಕ ಮೂಗನ್ನು ಸರಿಪಡಿಸಲು ಪ್ರಯತ್ನಿಸಲಾಗುವುದು ಎಂದು ಮಕ್ಕಳ ತಜ್ಞ ಡಾ.ಧವಲ್ ಪಟೇಲ್ ತಿಳಿಸಿದ್ದಾರೆ. ಮಗುವಿನ ಆರೋಗ್ಯ ಸ್ಥಿತಿ ಸ್ಥಿರವಾದ ಕೂಡಲೇ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತದೆ. ಇನ್ನು ಈ ರೀತಿ ಮಕ್ಕಳಲ್ಲಿ ಒಂದು ಅಂಗಕ್ಕಿಂತ ಹೆಚ್ಚು ಅಂಗವಿರಲು ಅನುವಂಶಿಕ ಕಾಯಿಲೆಗಳು ಕಾರಣವಾಗುತ್ತವೆ. ಇಂಥಹ ಪ್ರಕರಣಗಳನ್ನು ವಿವಿಧ ಚಿಕಿತ್ಸೆಗಳ ಮೂಲಕ ಸರಿಪಡಿಸಲಾಗುತ್ತದೆ. ಆದರೆ ಅದಕ್ಕೆ ಕುಟುಂಬದ ಸಂಪೂರ್ಣ ಒಪ್ಪಿಗೆ ಅತ್ಯಗತ್ಯ ಎಂದಿದ್ದಾರೆ.
ರಾಜಸ್ಥಾನದಲ್ಲಿ 1 ಮಗುವಿಗೆ 2 ಹೃದಯ, 4 ಕೈ ಕಾಲು: ಮಾರ್ಚ್ ತಿಂಗಳಿನಲ್ಲಿ ರಾಜಸ್ಥಾನದ ಚುರು ಪ್ರದೇಶದಲ್ಲಿ ನಾಲ್ಕು ಕೈ ಕಾಲುಗಳಿರುವ ವಿಚಿತ್ರ ಹೆಣ್ಣು ಮಗುವೊಂದು ಜನಿಸಿತ್ತು. ಆದರೆ ಆ ಮಗು ಕೇವಲ 20 ನಿಮಿಷದಲ್ಲಿ ಸಾವನ್ನಪ್ಪಿದೆ. ಮಗುವಿನ ತಾಯಿ 19ವರ್ಷದ ಮಮತಾ ಕನ್ವರ್ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಗೆ ವೈದ್ಯರ ಸಲಹೆ ಮೇರೆಗೆ ಸೋನೋಗ್ರಫಿ ಮಾಡಲಾಯಿತು. ಸೋನೋಗ್ರಫಿ ವೇಳೆ ಮಹಿಳೆಯ ಹೊಟ್ಟೆಯಲ್ಲಿ ವಿಚಿತ್ರವಾದ ಮಗು ಇರುವುದು ಪತ್ತೆಯಾಗಿದೆ.
ಅದೇ ವೇಳೆ, ಆ ಮಗುವಿಗೆ ಎರಡು ಹೃದಯ ಬಡಿತಗಳು ಇರುವುದೂ ಅನುಭವಕ್ಕೆ ಬಂದಿದೆ. ಆಸ್ಪತ್ರೆಗೆ ದಾಖಲಾದ ಸುಮಾರು ಒಂದು ಗಂಟೆಯ ನಂತರ ಯಾವುದೇ ಆಪರೇಷನ್ ಮಾಡದೇ ಸಾಮಾನ್ಯ ಹೆರಿಗೆಯಲ್ಲಿಯೇ ತಾಯಿ ಮಗುವಿಗೆ ಜನ್ಮ ನೀಡಿದ್ದಳು. ಆದರೆ ಮಗು 20 ನಿಮಿಷದಲ್ಲಿ ಸಾವನ್ನಪ್ಪಿದೆ. ಈ ರೀತಿಯ ಹೆರಿಗೆಯನ್ನು ಕಾಂಜುನೋಕಲ್ ಅನೋಮಲಿ ಎಂದು ಕರೆಯಲಾಗುತ್ತದೆ.
ಯೂಟ್ಯೂಬ್ ನೋಡಿ ಹೆರಿಗೆ ಮಾಡಿಕೊಂಡ ವಿದ್ಯಾರ್ಥಿನಿ, ಮಗು ಸಾವು: ಮಹಾರಾಷ್ಟ್ರದಲ್ಲಿ ಬಾಲಕಿ ಕೆಲ ದಿನಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು. ಈ ನೋವು ಹೆಚ್ಚಾಗ ಯೂಟ್ಯೂಬ್ನಲ್ಲಿ ವಿಡಿಯೋಗಳನ್ನು ವೀಕ್ಷಿಸಿ ತನ್ನ ಮನೆಯಲ್ಲೇ ಪ್ರಸವಕ್ಕೆ ಬೇಕಾದ ಸಾಮಗ್ರಿಗಳನ್ನೆಲ್ಲಾ ತಾನೇ ಜೋಡಿಸಿಕೊಂಡಿದ್ದಳು. ಇದರ ನಡುವೆ ತಾಯಿ ಕೆಲಸಕ್ಕೆ ಹೋದಾಗ ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಆಗ ಯೂಟ್ಯೂಬ್ ವಿಡಿಯೋಗಳನ್ನು ನೋಡುತ್ತ ಮಗುವಿಗೆ ಜನ್ಮ ನೀಡಲು ಮುಂದಾಗಿದ್ದಳು.
ಆದರೆ, ಈ ಘಟನೆಯಲ್ಲಿ ಮಗು ಸಾವನ್ನಪ್ಪಿದ್ದರಿಂದ ಆ ಶವವನ್ನು ಬಚ್ಚಿಟ್ಟಿದ್ದರು. ಮತ್ತೊಂದೆಡೆ, ತಾಯಿ ಮನೆಗೆ ಹಿಂದಿರುಗಿದಾಗ ಕೊಠಡಿಯ ಎಲ್ಲೆಡೆ ರಕ್ತದ ಕಲೆಗಳು ಪತ್ತೆಯಾಗಿದ್ದವು. ಜೊತೆಗೆ ಬಾಲಕಿಯ ಆರೋಗ್ಯವೂ ಹದಗೆಟ್ಟಿತ್ತು. ಆಗ ಬಾಲಕಿಯನ್ನು ತಾಯಿ ವಿಚಾರಿಸಿದಾಗ ಇಡೀ ಘಟನೆ ಬೆಳಕಿಗೆ ಬಂದಿತ್ತು. ನಂತರ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಸಲಿಗೆ ಸಂತ್ರಸ್ತ ಬಾಲಕಿ ಸದ್ಯ ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದು, ಒಂದು ವರ್ಷದ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಚಾಟ್ ಮಾಡುವಾಗ ಬಾಲಕಿಗೆ ಏಕ್ ಠಾಕೂರ್ ಎಂಬ ಯುವಕನ ಪರಿಚಯವಾಗಿತ್ತು. ಈತ ಪ್ರೀತಿಯ ಹೆಸರಲ್ಲಿ ಅತ್ಯಚಾರವೆಸಗಿದ್ದ. ಈ ಘಟನೆ ಇದೇ ಮಾರ್ಚ್ ತಿಂಗಳಿನಲ್ಲಿ ನಡೆದಿತ್ತು.
ಇದನ್ನೂ ಓದಿ: ವೈದ್ಯಲೋಕಕ್ಕೆ ಅಚ್ಚರಿ ಮೂಡಿಸಿದ ವಿಚಿತ್ರ ಮಗು: ಒಂದೇ ದೇಹದಲ್ಲಿ ಎರಡು ಹೃದಯ, ನಾಲ್ಕು ಕೈ ಕಾಲು