ವಡೋದರಾ: ಪ್ರೀತಿಯ ವಿಚಾರವಾಗಿ ಯುವತಿಯ ಸಂಬಂಧಿಕರು ಯುವಕನೊಬ್ಬನನ್ನು ಮರಕ್ಕೆ ಕಟ್ಟಿ ಕ್ರೂರವಾಗಿ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಪದ್ರಾ ತಹಸಿಲ್ನ ಚೋಕರಿ ಗ್ರಾಮದಲ್ಲಿ ನಡೆದಿದ್ದು, ಹಲ್ಲೆಯ ವಿಡಿಯೋ ಈಗ ವೈರಲ್ ಆಗಿದೆ.
20 ವರ್ಷದ ಜಯೇಶ್ ರಾವಲ್ ಎಂಬ ಯುವಕ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಈ ವಿಚಾರ ತಿಳಿದು ಯುವತಿಯ ಮನೆಯವರು ಆತನನ್ನು ಅಪಹರಿಸಿ ಮರಕ್ಕೆ ಕಟ್ಟಿ ಅಮಾನುಷವಾಗಿ ಥಳಿಸಿದ್ದಾರೆ. ನಾಲ್ಕೈದು ಮಂದಿ ಸೇರಿ ಯುವಕನಿಗೆ ದೊಣ್ಣೆಯಿಂದ ಹೊಡೆಯುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ಹಲ್ಲೆ ವೇಳೆ, ಜಯೇಶ್ ಪ್ರಜ್ಞೆ ತಪ್ಪಿ ಬಿದ್ದು ಸಾವನ್ನಪ್ಪಿದ್ದಾನೆ. ಈ ವಿಚಾರವನ್ನು ತಿಳಿದ ಯುವಕನ ತಾಯಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ವಡೋದರಾ ಎಸ್ಪಿ ಸ್ಥಳಕ್ಕೆ ಧಾವಿಸಿ ಯುವಕನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಸದ್ಯ ಪ್ರಕರಣಕ್ಕೆ ಸಂಬಂಧಿಸಿ ಯುವತಿಯ ತಂದೆ ಸೇರಿ ನಾಲ್ಕು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಅಪಹರಣ ಮತ್ತು ಕೊಲೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.