ಅಮೃತಸರ (ಪಂಜಾಬ್): 12 ವರ್ಷದ ಬಾಲಕಿಯೊಬ್ಬಳು ಮಗುವಿಗೆ ಜನ್ಮ ನೀಡಿರುವ ಘಟನೆ ಅಮೃತಸರದಲ್ಲಿ ನಡೆದಿದೆ. ಫಗ್ವಾರಾ ಮೂಲದ ಬಾಲಕಿಯ ಆರೋಗ್ಯ ಹದಗೆಟ್ಟ ಹಿನ್ನೆಲೆ ಆಸ್ಪತ್ರೆಗೆ ಕರೆತರಲಾಗಿದ್ದು, ಈ ವೇಳೆ ಬಾಲಕಿ ಮಗುವಿಗೆ ಜನ್ಮ ನೀಡಿದ್ದಾಳೆ. ಈ ಕುರಿತು ಪ್ರಕರಣ ದಾಖಲಾಗಿದ್ದು ಫಗ್ವಾರಾ ಪೊಲೀಸ್ ತಂಡವೂ ತನಿಖೆ ಆರಂಭಿಸಿದೆ.
ಅಪ್ರಾಪ್ತೆ ಕಳೆದ 7 ತಿಂಗಳಿನಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು. ಬಾಲಕಿಯ ತಂದೆ ಆಕೆಯನ್ನು ಅಮೃತಸರದ ಗುರುನಾನಕ್ ದೇವ್ ಆಸ್ಪತ್ರೆಗೆ ಕರೆತಂದಿದ್ದಾರೆ. ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿತ್ತು. ಬಳಿಕ ಪರೀಕ್ಷೆ ನಡೆಸಿದ ವೇಳೆ ಬಾಲಕಿ ಗರ್ಭಿಣಿ ಎಂದು ತಿಳಿದುಬಂದಿದೆ. ಇದಿರಂದ ಇಡೀ ಕುಟುಂಬವೇ ಬೆಚ್ಚಿಬಿದ್ದಿದ್ದು, ವೈದ್ಯರು ಕೂಡ ಗಾಬರಿಗೊಂಡಿದ್ದಾರೆ. ಕೂಡಲೇ ಈ ಬಗ್ಗೆ ಆಕೆಯ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಆಸ್ಪತ್ರೆಗೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಬಾಲಕಿ ಬೆಳಗ್ಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಬಾಲಕಿ ಮತ್ತು ಆಕೆಯ ಮಗುವಿನ ಆರೈಕೆಗಾಗಿ ವೈದ್ಯರ ತಂಡ ಹಿಂದ್ ಸಮಾಜ್ ಏಕತಾ ಸಂಸ್ಥೆಯನ್ನು ಸಂಪರ್ಕಿಸಿದೆ. ಈ ಬಗ್ಗೆ ಹಿಂದ್ ಸಮಾಜ ಏಕತಾ ಪದಾಧಿಕಾರಿ ಸಂತೋಷ್ ಕುಮಾರ್ ಮಾತನಾಡಿ, ಬಾಲಕಿಯ ತಂದೆ ಹೇಳುವ ಪ್ರಕಾರ ಕಳೆದ 7 ತಿಂಗಳಿನಿಂದ ಬಾಲಕಿ ಹೊಟ್ಟೆನೋವಿನಿಂದ ಬಳಲುತ್ತಿದ್ದಳು. ಅವಳ ತಂದ ಹೊಟ್ಟಿ ನೋವು ಕಾಣಿಸಿಕೊಂಡ ಸಮಯದಲ್ಲಿ ಔಷಧ ನೀಡುತ್ತಿದ್ದರು. ಹೊಟ್ಟೆ ನೋವು ಸಮಸ್ಯೆ ನಿರಂತರವಾಗಿ ಕಾಣಿಸಿದ್ದರಿಂದ ಆಕೆಯ ತಂದೆ ಪರೀಕ್ಷೆಗಾಗಿ ತನ್ನ ಮಗಳನ್ನು ಗುರುನಾನಕ್ ದೇವ್ ಆಸ್ಪತ್ರೆಗೆ ಕರೆತಂದಿದ್ದಾರೆ. ಪರೀಕ್ಷೆ ಬಳಿಕವಷ್ಟೇ ಬಾಲಕಿ ಗರ್ಭಿಣಿಯಾಗಿರುವುದು ಆಕೆಯ ತಂದೆಗೆ ತಿಳಿದು ಬಂದಿದೆ. 2 ವರ್ಷಗಳ ಹಿಂದೆ ಬಾಲಕಿಯ ತಾಯಿ ಪತಿಯಿಂದ ದೂರವಾಗಿದ್ದರು.
ಈ ಬಗ್ಗೆ ಸಂತ್ರಸ್ತ ಬಾಲಕಿಗೆ ಮಕ್ಕಳ ಮಹಿಳಾ ಸದಸ್ಯೆ ಕುಮಾರಿ ಜ್ಯೋತಿ ಡಿಂಪಲ್ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಬಾಲಕಿ ನಡೆದಿರುವ ಘಟನೆಯನ್ನು ವಿವರಿಸಿದ್ದಾಳೆ. ತೀರ ಬಡತನದ ಕುಟುಂಬವಾದ್ದರಿಂದ ಮನೆಯಲ್ಲಿ ಶೌಚಾಲಯವಿಲ್ಲದೇ ದಿನವು ಬಯಲು ಶೌಚಾಲಯಕ್ಕೆ ಹೋಗಬೇಕಿತ್ತು. ಈ ವೇಳೆ ವ್ಯಕ್ತಿಯೊಬ್ಬ ತನ್ನ ಮೇಲೆ ದೌರ್ಜನ್ಯ ಎಸಗಿದ್ದಾನೆ. ಅಲ್ಲದೇ ಯಾರಿಗೂ ಈ ಬಗ್ಗೆ ತಿಳಿಸದಂತೆ ಬೆದರಿಕೆ ಒಡ್ಡಿದ್ದಾನೆ. ಬೆದರಿಕೆ ಹಿನ್ನೆಲೆಯಲ್ಲಿ ಭಯಭೀತಳಾದ ಬಾಲಕಿ ನಡೆದಿರುವ ಘಟನೆ ಬಗ್ಗೆ ತನ್ನ ತಂದೆಗೆ ತಿಳಿಸಲು ಸಾಧ್ಯವಾಗಿರಲಿಲ್ಲ. ಅಲ್ಲದೇ ಕೃತ್ಯ ಎಸಗಿದ್ದ ವ್ಯಕ್ತಿಯ ಹೆಸರು ಬಾಲಕಿಗೆ ತಿಳಿದಿಲ್ಲ. ಆದರೆ ಅವರನ್ನು ಗುರುತಿಸುವುದಾಗಿ ಬಾಲಕಿ ಹೇಳಿದ್ದಾಳೆ ಎಂದು ಸಂತೋಷ್ ಕುಮಾರ್ ಹೇಳಿದ್ದಾರೆ.
ಐಸಿಯುನಲ್ಲಿ ನವಜಾತ ಶಿಶು: ನವಜಾತ ಶಿಶುವಿನ ತೂಕ ಕಡಿಮೆಯಿದ್ದು ಸ್ಥಿತಿ ಗಂಭೀರವಾಗಿದೆ. ಮಗುವಿನ ತೂಕ ಕೇವಲ 800 ಗ್ರಾಂ ಇದ್ದು, ಸದ್ಯ ಮಗುವನ್ನು ಐಸಿಯುನಲ್ಲಿ ಇರಿಸಲಾಗಿದೆ. ಸಂತ್ರಸ್ತೆಯ ಸ್ಥಿತಿಯೂ ಚಿಂತಾಜನಕವಾಗಿದೆ. ಪೊಲೀಸರು ತಮ್ಮ ಮಟ್ಟದಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದು ಸಂತೋಷ್ ಹೇಳಿದ್ದಾರೆ. ಸಂತ್ರಸ್ತ ಬಾಲಕಿಯ ಹೇಳಿಕೆಯನ್ನು ದಾಖಲಿಸಿಕೊಂಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆರೋಪಿಗಳನ್ನು ಶೀಘ್ರ ಬಂಧಿಸಬೇಕು ಎಂದು ಕುಟುಂಬದವರು ಹಾಗೂ ಸಂಘಟನೆಯ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಯುವಕನ ಅತ್ಯಾಚಾರ ಕೃತ್ಯಕ್ಕೆ ಅಪ್ರಾಪ್ತ ಬಾಲಕಿ ಬಲಿ?