ಕೋಲ್ಕತ್ತಾ: ಪಶ್ಚಿಮ ಬಂಗಾಳದ ವಿವಿಧೆಡೆ ನಿನ್ನೆ ಗುಡುಗು ಸಹಿತ ಭಾರೀ ಮಳೆ ಹಿನ್ನೆಲೆಯಲ್ಲಿ ಸಿಡಿಲಿಗೆ ಒಟ್ಟು 27 ಜನರು ಮೃತಪಟ್ಟಿದ್ದಾರೆ. ಹೂಗ್ಲಿಯಲ್ಲಿ 11, ಮುರ್ಷಿದಾಬಾದ್ 9, ಬಂಕುರಾ, ಪೂರ್ವ ಮಿಡ್ನಾಪುರ ಮತ್ತು ಪಶ್ಚಿಮ ಮಿಡ್ನಾಪುರದಲ್ಲಿ ತಲಾ ಇಬ್ಬರು ಮತ್ತು ನಾಡಿಯಾದಲ್ಲಿ ಒಬ್ಬರು ಸಿಡಿಲಿಗೆ ಬಲಿಯಾಗಿದ್ದಾರೆ.
ಅರಾಂಬಾಗ್ ಉಪವಿಭಾಗದಲ್ಲಿ ಒಂದೇ ಕಡೆ ಐವರು ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಎಲ್ಲರೂ ಮಧ್ಯಾಹ್ನ ಕೃಷಿ ಕೆಲಸಕ್ಕೆಂದು ಹೊಲಕ್ಕೆ ತೆರಳಿದ್ದರು. ಮನೆಗೆ ಹೋಗುವಾಗ ಸಿಡಿಲು ಅಪ್ಪಳಿಸಿದ್ದು, ಕುಟುಂಬ ಸದಸ್ಯರು ಅವರನ್ನು ಆಸ್ಪತ್ರೆಗೆ ಕರೆತರುವ ವೇಳೆಗಾಗಲೇ ಎಲ್ಲರೂ ಮೃತಪಟ್ಟಿದ್ದರು.
ಮತ್ತೊಂದೆಡೆ, ಹರಿಪಾಲ್‌ನಲ್ಲಿ ನಡೆದ ಮಿಂಚಿನ ದಾಳಿಯಲ್ಲಿ ದಿಲೀಪ್ ಘೋಷ್ ಎಂಬ ವೃದ್ಧ, ಪೋಲ್ಬಾ ದಾದ್ಪುರದಲ್ಲಿ ಹರೂನ್ ರಶೀದ್ ಎಂಬ ವ್ಯಕ್ತಿ ಸಿಂಗೂರ್ ಮೂಲದ ಗೃಹಿಣಿ ಸುಷ್ಮಿತಾ ಕೋಲ್ ಸಿಡಿಲಿನ ಹೊಡೆತಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ. ಮತ್ತೊಂದೆಡೆ, ಕಿರಣ್ ರಾಯ್ ಎಂಬ ಯುವಕ, ತಾರಕೇಶ್ವರ ರಶೀದ್ಪುರ ಪ್ರದೇಶದಲ್ಲಿ ಸಂಜಿತ್ ಸಮಂತಾ ಎಂಬ ವ್ಯಕ್ತಿ ಬಲಿಯಾಗಿದ್ದಾರೆ.
ಮುರ್ಷಿದಾಬಾದ್‌ನ ರಘುನಾಥಗಂಜ್ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಮಿರ್ಜಾಪುರ ಗ್ರಾಮ ಪಂಚಾಯಿತಿಯ ನವೋದಾ ಗ್ರಾಮದ ಆರು ಮಂದಿ ರೈತರು ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಮೃತರನ್ನು ಸನಿರುಲ್ ಇಸ್ಲಾಂ (25), ಸುನಿಲ್ ದಾಸ್ (35), ದುರ್ಜಾಧನ್ ದಾಸ್ (32), ಸೂರ್ಯ ಕರ್ಮಕರ್ (23), ಮಜರುಲ್ ಶೇಖ್ ಮತ್ತು ಜಲಾಲುದ್ದೀನ್ ಶೇಖ್ (28) ಎಂದು ಗುರುತಿಸಲಾಗಿದೆ. ರಾಜ್ಯಾದ್ಯಂತ ಸಿಡಿಲಿನ ಅಬ್ಬರಕ್ಕೆ ಹಲವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.