ನಿಮಚ್(ಮಧ್ಯಪ್ರದೇಶ): ಉತ್ಸಾಹ, ಶಕ್ತಿ ಮತ್ತು ಇಚ್ಛಾಶಕ್ತಿ ಇದ್ದರೆ ಯಾವುದೇ ಕೆಲಸಕ್ಕೂ ವಯಸ್ಸು ಅಡ್ಡಿಯಾಗಲ್ಲ ಎಂಬುದು ಅನೇಕ ಪ್ರಕರಣಗಳಲ್ಲಿ ಸಾಬೀತುಗೊಂಡಿದೆ. ಸದ್ಯ ಮಧ್ಯಪ್ರದೇಶದ ವೃದ್ಧೆಯೊಬ್ಬರು ಮತ್ತೊಂದು ಉದಾಹರಣೆಯಾಗಿದ್ದಾರೆ. ವಯಸ್ಸಾದ ಸಮಯದಲ್ಲಿ ತಮ್ಮ ಪ್ರೀತಿಪಾತ್ರರ ಆಸರೆ ಪಡೆದುಕೊಂಡು, ದೇವರ ಜಪ ಮಾಡುತ್ತ ಮನೆಯಲ್ಲಿ ಕಾಲ ಕಳೆಯುವುದು ಸಾಮಾನ್ಯ. ಆದರೆ, 80ರ ವೃದ್ಧೆಯೊಬ್ಬರು ಒಂದು ಹೆಜ್ಜೆ ಮುಂದೆ ಇಟ್ಟಿದ್ದು, ಯುವಕರು ನಾಚಿಸುವ ರೀತಿಯಲ್ಲಿ ಬೈಕ್ ರೈಡ್ ಮಾಡಿಕೊಂಡು ತೀರ್ಥಯಾತ್ರೆ ಆರಂಭಿಸಿದ್ದಾರೆ.
80 ವರ್ಷದ ಸೋಹನಬಾಯಿ ಬೈಕ್ ಮೇಲೆ 600 ಕಿಲೋ ಮೀಟರ್ ಕ್ರಮಿಸಿ, ಬಾಬಾ ರಾಮದೇವ ಅವರ ಆಶ್ರಮ ತಲುಪಿದ್ದಾರೆ. ಮಧ್ಯಪ್ರದೇಶದ ನಿಮಚ್ನಿಂದ ಬೈಕ್ ರೈಡ್ ಮಾಡಿಕೊಂಡು ರಾಜಸ್ಥಾನದ ಪ್ರಸಿದ್ಧ ಯಾತ್ರಾಸ್ಥಳಕ್ಕೆ ಬಂದಿದ್ದಾರೆ. ಅದಕ್ಕೋಸ್ಕರ ಏಕಾಂಗಿಯಾಗಿ 600 ಕಿಲೋ ಮೀಟರ್ ದ್ವಿಚಕ್ರ ವಾಹನನವನ್ನು ಚಲಾಯಿಸಿದ್ದಾರೆ ಈ ಕೆಚ್ಚೆದೆಯ ಅಜ್ಜಿ.
ದೃಢಸಂಕಲ್ಪ, ಉತ್ಸಾಹ ಮತ್ತು ಧೈರ್ಯವಿದ್ದರೆ ಯಾವ ಕೆಲಸವೂ ಕಷ್ಟವಲ್ಲ ಎಂಬುದನ್ನು 80ರ ಸೋಹನಬಾಯಿ ತೋರಿಸಿಕೊಟ್ಟಿದ್ದು, ಯುವಕರು ನಾಚುವ ರೀತಿಯಲ್ಲಿ ಬೈಕ್ ರೈಡ್ ಮಾಡ್ತಾರೆ. ಬಾಬಾರಾಮದೇವರ ಆಶ್ರಮಕ್ಕೆ ಏಕಾಂಗಿಯಾಗಿ ಬೈಕ್ ರೈಡ್ ಮಾಡಿಕೊಂಡು ಬಂದಿರುವ ವೃದ್ಧೆ, ಈ ರೋಚಕ ಪ್ರಯಾಣ ಖುದ್ದಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಇವರ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡ್ತಿದೆ.
ಸೋಹನಬಾಯಿ(80) ನಿಮುಚ್ ಜಿಲ್ಲೆಯ ಜಲೇನೀರ್ ಗ್ರಾಮದವರು. ಹರಿಚಂದ್ ಧಂಗರ್ ಎಂಬುವರೊಂದಿಗೆ ಮದುವೆ ಮಾಡಿಕೊಂಡಿದ್ದು, ಸದ್ಯ ಏಕಾಂಗಿಯಾಗಿ ಜೀವನ ನಡೆಸುತ್ತಾರೆ. ಆದರೆ, ಪ್ರತಿ ವರ್ಷವೂ ಬೈಕ್ನಲ್ಲಿ ಪ್ರಯಾಣ ಬೆಳೆಸುತ್ತಾರೆ.
ತಾಯಿಯ ಮನೆಯಲ್ಲಿ ವಾಸ: ಹರಿಚಂದ್ ಜೊತೆ ಮದುವೆ ಮಾಡಿಕೊಂಡಿದ್ದ ಸೋಹನಬಾಯಿ ದಾಂಪತ್ಯದಲ್ಲಿ ಬಿರುಕು ಉಂಟಾಗಿರುವ ಕಾರಣ ತಮ್ಮ ಮೂವರು ಮಕ್ಕಳೊಂದಿಗೆ ತಾಯಿ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಅವರಿಗೆ ಮದುವೆ ಮಾಡಿದ ಬಳಿಕ ಸದ್ಯ ಏಕಾಂಗಿಯಾಗಿ ಬದುಕುತ್ತಿದ್ದಾರೆ. ಬಾಬಾ ರಾಮದೇವರ ಭಕ್ತೆಯಾಗಿರುವ ವೃದ್ಧೆ ಪ್ರತಿ ವರ್ಷ ತಮ್ಮ ಹಳ್ಳಿಯಿಂದ ಮೋಟಾರ್ ಸೈಕಲ್ ಮೇಲೆ ಪ್ರಯಾಣ ಬೆಳೆಸುತ್ತಾರೆ. ಕಳೆದ ಏಳು ವರ್ಷಗಳಿಂದ ನಿರಂತರವಾಗಿ ಬಾಬಾ ರಾಮದೇವ ಅವರ ಆಶ್ರಮಕ್ಕೆ ತೆರಳುತ್ತಿದ್ದು, 600 ಕಿಲೋ ಮೀಟರ್ ಪ್ರಯಾಣಿಸುತ್ತಾರೆ.