ಮೆಡ್ಚಲ್: ಅಪ್ರಾಪ್ತ ವಯಸ್ಸಿನ ಇಬ್ಬರು ಸಹೋದರರು ಕೇವಲ 25 ದಿನಗಳಲ್ಲಿ 4 ಲಕ್ಷ ರೂಪಾಯಿ ಹಣವನ್ನು ತಂದೆಯ ಲಾಕರ್ನಿಂದ ಕದ್ದು ಖರ್ಚು ಮಾಡಿರುವ ಘಟನೆ ನಗರದಲ್ಲಿ ಸಂಚಲನ ಮೂಡಿಸಿದೆ. 25 ದಿನಗಳಲ್ಲಿ ಆ ಒಡಹುಟ್ಟಿದವರು ಏನೇನು ಖರ್ಚು ಮಾಡಿದರು ಎಂಬುದರ ಮಾಹಿತಿಯನ್ನು ತಿಳಿಯೋಣ..
ಜೀಡಿಮೆಟ್ಲ ಪೊಲೀಸರ ಪ್ರಕಾರ: 8 ವರ್ಷಗಳಿಂದ ಮೆಡ್ಚಲ್ ಜಿಲ್ಲೆಯ ಜೀಡಿಮೆಟ್ಲದ ಎಸ್‌ಆರ್ ನಾಯಕ್ ನಗರದಲ್ಲಿ ಬಾಲಕರ ಕುಟುಂಬ ವಾಸಿಸುತ್ತಿದೆ. ಈ ಬಾಲಕರ ತಂದೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ತಾಯಿ ಮನೆಯಲ್ಲೇ ಸಣ್ಣದೊಂದು ಚಿಲ್ಲರೆ ಅಂಗಡಿಯನ್ನು ನಡೆಸುತ್ತಿದ್ದಾರೆ. ಈ ಅಣ್ತಮ್ಮಂದಿರು 14-15 ವರ್ಷದ ಸಹೋದರರ ಜೊತೆ ಗೆಳೆತನ ಹೊಂದಿದ್ದಾರೆ.
ಬೇಸಿಗೆ ರಜೆಯಾಗಿದ್ದರಿಂದ ಅಣ್ತಮ್ಮಂದಿರು ಇಬ್ಬರು ಮನೆಯಲ್ಲಿ ಆಟವಾಡುತ್ತ ಕಾಲ ಕಳೆಯುತ್ತಿದ್ದರು. ಇವರೊಂದಿಗೆ 14-15 ವರ್ಷದ ಗೆಳೆಯರು ಜೊತೆಯಾಗಿದ್ದಾರೆ. ಪ್ರತಿದಿನ ಅಣ್ತಮ್ಮಂದಿರು ಆಟವಾಡಲು ಹೊರಗೆ ಹೋದಾಗ ಸ್ವಲ್ಪ ಹಣ ತೆಗೆದುಕೊಂಡು ಹೋಗುತ್ತಿದ್ದರು. ಬಳಿಕ ಬೇಕರಿ ತಿಂಡಿಗಳನ್ನು ಖರೀದಿಸಿ ತಮ್ಮ ಸ್ನೇಹಿತರೊಂದಿಗೆ ಹಂಚಿಕೊಂಡು ತಿನ್ನುತ್ತಿದ್ದರು. ಇದನ್ನು ಗಮನಿಸಿದ 14-15 ವರ್ಷದ ಸಹೋದರರು ಅವರಿಂದ ಹಣವನ್ನು ಬಿಚ್ಚಿಸಿದ್ದರು.
ಓದಿ: ಹುಬ್ಬಳ್ಳಿಯಲ್ಲಿ ಹಾಡಹಗಲೇ ಫೈನಾನ್ಸ್ ಕಚೇರಿಗೆ ನುಗ್ಗಿ ₹4 ಲಕ್ಷ ಲೂಟಿ
ಅಣ್ತಮ್ಮಂದಿರಿಗೆ ಇಲ್ಲದೆಲ್ಲ ಆಸೆ ಹುಟ್ಟಿಸಿ ಮನೆಯಿಂದ ಹಣವನ್ನು ತರಲು ಪ್ರೇರೇಪಿಸಿದರು. ಸ್ನೇಹಿತರ ಮಾತು ಕೇಳಿ ಅವರಿಬ್ಬರು ಅಪ್ಪನ ಲಾಕರ್ನಿಂದ ಕಂತೆ-ಕಂತೆ ಹಣವನ್ನು ತಂದಿದ್ದಾರೆ. ಈ ಹಣವನ್ನು ಮೊಬೈಲ್ ಫೋನ್, ಸ್ಮಾರ್ಟ್ ವಾಚ್, ಗೇಮಿಂಗ್ ಸೆಂಟರ್, ರೆಸ್ಟೋರೆಂಟ್ ಸೇರಿದಂತೆ ಇನ್ನಿತರ ಸ್ಥಳಕ್ಕೆ ತೆರಳಿ ಸಖತ್ ಎಂಜಾಯ್ ಮಾಡಿದ್ದಾರೆ.
ಹೀಗೆ ವಿವಿಧ ಕಾರಣಗಳನ್ನು ಹೇಳಿ ಅಣ್ತಮ್ಮಂದಿರು ಬಳಿ ಇದ್ದ ಸುಮಾರು 4 ಲಕ್ಷ ರೂಪಾಯಿಯನ್ನು 14-15 ವರ್ಷದ ಸಹೋದರರು ಲಪಟಾಯಿಸಿದ್ದಾರೆ. ಒಮ್ಮೆ ಲಾಕರ್‌ನಲ್ಲಿದ್ದ ಹಣವನ್ನೆಲ್ಲಾ ಲೂಟಿ ಮಾಡಿದ 8-9 ವರ್ಷದ ಅಣ್ತಮ್ಮಂದಿರಿಗೆ ಪೋಷಕರು ಗದರಿಸಬಹುದೆಂದು ಹೆದರುತ್ತಿದ್ದರು. ಹೀಗಾಗಿ ಅಂಗಡಿಯೊಂದಕ್ಕೆ ತೆರಳಿ ನಕಲಿ ನೋಟುಗಳನ್ನು ಖರೀದಿಸಿ ಮತ್ತೆ ಲಾಕರ್‌ನಲ್ಲಿ ಇರಿಸಿದ್ದರು.
ಒಂದು ದಿನ 8-9 ವರ್ಷದ ಸಹೋದರರ ತಂದೆ ಹಣಕ್ಕಾಗಿ ಲಾಕರ್ ತೆರೆದಾಗ ಅಸಲಿ ನೋಟುಗಳ ಬದಲಿಗೆ ನಕಲಿ ನೋಟುಗಳು ಕಂಡುಬಂದಿವೆ. ಕೂಡಲೇ ಅವರು ಪೊಲೀಸರಿಗೆ ಕರೆ ಮಾಡಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ಪ್ರಕರಣದ ತನಿಖೆ ವೇಳೆ ಪೊಲೀಸರು ದೂರುದಾರರ ಮಕ್ಕಳಿಬ್ಬರ ಮೇಲೆ ಅನುಮಾನಗೊಂಡು ಹಣದ ಬಗ್ಗೆ ವಿಚಾರಿಸಿದ್ದಾರೆ. ಮುಗ್ಧ ಹುಡುಗರು ಅವರ ಸ್ನೇಹಿತರ ಬಗ್ಗೆ ವಿವರವಾಗಿ ಹೇಳಿದ್ದಾರೆ. ನಂತರ ಪೊಲೀಸರಿಗೆ ಅಸಲಿಯತ್ತು ತಿಳಿದಿದೆ.
ಈ ಸಹೋದರರನ್ನು ವಂಚಿಸಿ ಲಕ್ಷಾಂತರ ರೂಪಾಯಿ ಪೀಕಿದ 14-15 ವರ್ಷದ ಒಡಹುಟ್ಟಿದವರನ್ನು ಪೊಲೀಸರು ಬಂಧಿಸಿದರು. ಪೊಲೀಸರು ಬಂಧಿತರಿಂದ ಕೈಗಡಿಯಾರಗಳು, ಮೊಬೈಲ್ ಫೋನ್‌ಗಳು ಮತ್ತು ಹೆಡ್‌ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಇಬ್ಬರು ಚಾಲಾಕಿ ಸಹೋದರರು ಹಣವನ್ನು ಆನ್‌ಲೈನ್ ಗೇಮಿಂಗ್ ಮತ್ತು ಚಲನಚಿತ್ರಗಳನ್ನು ವೀಕ್ಷಿಸಲು ಖರ್ಚು ಮಾಡಿದ್ದಾರೆ ಎಂಬುದು ಪೊಲೀಸರಿಗೆ ತಿಳಿದಿದೆ. ಪೋಷಕರು ಮಕ್ಕಳ ಮೇಲೆ ನಿಗಾ ಇಡಬೇಕು ಮತ್ತು ಅವರ ಸ್ನೇಹಿತರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಪೊಲೀಸರು ತಂದೆ-ತಾಯಿಗೆ ಸೂಚಿಸಿದರು.