ಚಂಢೀಗಢ(ಹರಿಯಾಣ): ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸುವ ಸಲುವಾಗಿ ಹರಿಯಾಣ ಸರ್ಕಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಕುರಿತು ಅಧಿಸೂಚನೆ ಹೊರಡಿಸಿರುವ ಸರ್ಕಾರ ಖಾಸಗಿ ಉದ್ಯಮಗಳಲ್ಲಿ ಸ್ಥಳೀಯರಿಗೆ ಶೇಕಡಾ 75ರಷ್ಟು ಮೀಸಲಾತಿ ನೀಡುವುದಾಗಿ ಹೇಳಿದೆ.
50 ಸಾವಿರ ರೂಪಾಯಿ ವೇತನ ಮೀರದ ಹುದ್ದೆಗಳಿಗೆ ಈ ಮೀಸಲಾತಿ ಅನ್ವಯವಾಗಲಿದ್ದು, ಮುಂದಿನ ವರ್ಷದ ಜನವರಿ 15ರಿಂದ ಈ ಕಾನೂನು ಜಾರಿಗೆ ಬರಲಿದೆ ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.
ರಾಜ್ಯದಲ್ಲಿರುವ ವಿವಿಧ ಉದ್ಯಮಗಳು, ಕಂಪನಿಗಳು, ಕೈಗಾರಿಕೆಗಳಲ್ಲಿ ಸೊಸೈಟಿಗಳು, ಟ್ರಸ್ಟ್ಗಳು ಮುಂತಾದ ಖಾಸಗಿ ಸಂಸ್ಥೆಗಳಲ್ಲಿ ಸ್ಥಳೀಯರಿಗೆ ಶೇಕಡಾ 75ರಷ್ಟು ಮೀಸಲಾತಿ ಕಲ್ಪಿಸಲಾಗುತ್ತದೆ.
ಹರಿಯಾಣ ರಾಜ್ಯ ಸ್ಥಳೀಯ ಅಭ್ಯರ್ಥಿಗಳ ಉದ್ಯೋಗ ಕಾಯ್ದೆಯ ವಿಭಾಗ 1ರ ಉಪ-ವಿಭಾಗ 3ರ ಅಡಿಯಲ್ಲಿ ನೀಡಲಾದ ಅಧಿಕಾರಗಳನ್ನು ಬಳಸಿ, 2022ರ ಜನವರಿ 15ರಿಂದ ಜಾರಿಗೆ ಬರುವಂತೆ ಸ್ಥಳೀಯರಿಗೆ ಖಾಸಗಿ ಉದ್ಯೋಗಗಳಲ್ಲಿ ಮೀಸಲಾತಿ ಕಲ್ಪಿಸಲು ರಾಜ್ಯಪಾಲರು ದಿನಾಂಕ ನಿಗದಿಪಡಿಸಿದ್ದಾರೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಹರಿಯಾಣ ರಾಜ್ಯ ಸ್ಥಳೀಯ ಅಭ್ಯರ್ಥಿಗಳ ಉದ್ಯೋಗ ಮಸೂದೆಯನ್ನು ಅಲ್ಲಿನ ವಿಧಾನಸಭೆಯು 2020ರ ನವೆಂಬರ್ನಲ್ಲಿ ಅಂಗೀಕರಿಸಿತ್ತು. ಇದಾದ ನಂತರ ಮಾರ್ಚ್ 2ರಂದು ರಾಜ್ಯಪಾಲರು ಮಸೂದೆಯನ್ನು ಅಂಗೀಕರಿಸಿದರು. ಈ ಕಾಯ್ದೆಯಿಂದಾಗಿ ಹರಿಯಾಣದ ಗುರುಗ್ರಾಮದಂತಹ ಕೆಲವು ನಗರಗಳಲ್ಲಿರುವ ಬೃಹತ್ ಉದ್ಯಮಗಳಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶ ಸಿಗಲಿದೆ.
ಇದನ್ನೂ ಓದಿ: ಯುವಜನತೆ ನಿಮ್ಮ ಮನದ ಮಾತಿನಂತೆ ನಡೆದುಕೊಳ್ಳಿ, ನಕಲು ಮಾಡಬೇಡಿ: NIT-Kಯಲ್ಲಿ ಇಸ್ರೋ ಅಧ್ಯಕ್ಷ ಶಿವನ್