ಹೈದರಾಬಾದ್: ಯಾವದೇ ದಾಖಲೆ ಇಲ್ಲದೇ ಅಪಾರ ಪ್ರಮಾಣದ ಹಣದೊಂದಿಗೆ ಪ್ರಯಾಣಿಸುತ್ತಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಹಿರಿಯ ಅಧಿಕಾರಿ ದಂಪತಿಯ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ. ಎನ್‌ಎಚ್‌ಎಐ ವರಂಗಲ್ ಯೋಜನಾ ಅನುಷ್ಠಾನ ಘಟಕದ ಯೋಜನಾ ನಿರ್ದೇಶಕ ಕಿಶೋರ ರಘುನಾಥ್ ಫುಲೆ (46) ಅವರು ತಮ್ಮ ಪತ್ನಿ ನಿಶಾ ಅವರೊಂದಿಗೆ ಜೂನ್ 7 ರಂದು ಕಾಜಿಪೇಟೆಯಿಂದ ನಾಗ್ಪುರಕ್ಕೆ ಪ್ರಯಾಣಿಸುತ್ತಿದ್ದಾಗ ಕಾಜಿಪೇಟೆ ಜಿಆರ್‌ಪಿ (Government Railway Police) ತಂಡಕ್ಕೆ ಸಿಕ್ಕಿಬಿದ್ದಿದ್ದಾರೆ.
ಬೆಂಗಳೂರು - ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ ಅಧಿಕಾರಿ ದಂಪತಿಯನ್ನು ತಪಾಸಣೆ ನಡೆಸಿದಾಗ ಅವರ ಬಳಿ 74.87 ಲಕ್ಷ ರೂ. ಹಣ ಪತ್ತೆಯಾಗಿದೆ. ಆದರೆ, ಇಷ್ಟೊಂದು ಅಪಾರ ಪ್ರಮಾಣದ ಹಣದ ಮೂಲದ ಬಗ್ಗೆ ಸರಿಯಾದ ಮಾಹಿತಿ ನೀಡಲು ದಂಪತಿ ವಿಫಲರಾಗಿದ್ದಾರೆ. ಹೀಗಾಗಿ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಐಟಿ ಇಲಾಖೆಗೆ ಹಣ ಹಸ್ತಾಂತರಿಸಿದ್ದಾರೆ.
ಐಟಿ ಇಲಾಖೆ ಈ ಬಗ್ಗೆ ವಿಚಾರಣೆ ನಡೆಸಿದ್ದು, ಹಣದ ಮೂಲದ ಬಗ್ಗೆ ದಂಪತಿ ದಾಖಲೆ ನೀಡಲು ವಿಫಲರಾಗಿದ್ದಾರೆ. ಹೀಗಾಗಿ ಅಧಿಕಾರದ ದುರುಪಯೋಗದಿಂದ ಈ ಹಣವನ್ನು ಪಡೆಯಲಾಗಿದೆ ಎಂದು ಐಟಿ ಇಲಾಖೆ ತೀರ್ಮಾನಿಸಿದೆ. ಆರೋಪಿಗಳಾದ ಕಿಶೋರ್ ರಘುನಾಥ್ ಫುಲೆ ಮತ್ತು ಅವರ ಪತ್ನಿ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.
ಇದನ್ನೂ ಓದಿ: ಎನ್‌ಹೆಚ್‌ಎಐ ಅಧಿಕಾರಿ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡ ಸಿಬಿಐ