ಚೆನ್ನೈ: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು 70 ಕೋಟಿ ರೂ.ಮೌಲ್ಯದ ಹೆರಾಯಿನ್ ವಶಪಡಿಸಿಕೊಂಡು, ಆಫ್ರಿಕನ್ ಮೂಲದ ಇಬ್ಬರು ಮಹಿಳೆಯರನ್ನು ಬಂಧಿಸಿದ್ದಾರೆ.
ಮಾದಕ ದ್ರವ್ಯಗಳನ್ನು ಕಳ್ಳಸಾಗಣೆ ಮಾಡುವ ಸಾಧ್ಯತೆಯಿದೆ ಎಂಬ ಮಾಹಿತಿಯ ಆಧಾರದ ಮೇಲೆ ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಜೋಹಾನ್ಸ್‌ಬರ್ಗ್‌ನಿಂದ ದೋಹಾ ಮೂಲಕ ಕತಾರ್ ಏರ್‌ವೇಸ್ ವಿಮಾನ 528 ರಲ್ಲಿ ಆಗಮಿಸಿದ ಇಬ್ಬರು ಆಫ್ರಿಕನ್ ಮಹಿಳೆಯರನ್ನು ಅನುಮಾನದ ಮೇಲೆ ತಡೆಯಲಾಯಿತು.
ಒರ್ವ ಮಹಿಳೆ ಸದೃಢವಾಗಿದ್ದರೂ ವ್ಹೀಲ್ ಚೇರ್ ಬಳಸುತ್ತಿರುವುದು ಗಮನಕ್ಕೆ ಬಂತು. ಇದರಿಂದ ಅನುಮಾನಗೊಂಡ ಕಸ್ಟಮ್ಸ್ ಅಧಿಕಾರಿಗಳು ಆಕೆಯನ್ನು ಗಮನಿಸಿ, ವಿಚಾರಿಸಿದರು. ವಿಚಾರಣೆ ವೇಳೆ ಆಕೆ ಗಾಬರಿಗೊಂಡಿದ್ದನ್ನು ಗಮನಿಸಿದ ಅಧಿಕಾರಿಗಳು ಬ್ಯಾಗ್ ಪರಿಶೀಲಿಸಿದರು.
ಚೀಲದಲ್ಲಿ ಹೆರಾಯಿನ್ ತುಂಬಿದ್ದು, ವಾಸನೆ ಬಾರದಂತೆ ಮಸಾಲೆ ಪುಡಿಯನ್ನಿಟ್ಟಿದ್ದರು. ಪರಿಶೀಲನೆ ವೇಳೆ 70 ಕೋಟಿ ರೂ.ಮೌಲ್ಯದ ಬಿಳಿ ಹೆರಾಯಿನ್ಅನ್ನು ವಶಪಡಿಸಿಕೊಳ್ಳಲಾಗಿದೆ. ಇಬ್ಬರನ್ನೂ ಎನ್‌ಡಿಪಿಎಸ್ ಕಾಯ್ದೆಯಡಿ ಬಂಧಿಸಲಾಗಿದೆ.
ಮುಂಬೈ ಏರ್ಪೋರ್ಟ್ನಲ್ಲೂ ಕಸ್ಟಮ್ಸ್ ಅಧಿಕಾರಿಗಳು ಹೆರಾಯಿನ್ ಸಾಗಿಸುತ್ತಿದ್ದ ಓರ್ವ ಮಹಿಳೆಯನ್ನು ಬಂಧಿಸಿದ್ದು 3.8 ಕೋಟಿ ರೂ.ಮೌಲ್ಯದ ಮಾದಕವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನು ಓದಿ: ಚೆನ್ನೈ ಏರ್ಪೋರ್ಟ್ನಲ್ಲಿ 100 ಕೋಟಿ ರೂ. ಮೌಲ್ಯದ ಹೆರಾಯಿನ್ ವಶಕ್ಕೆ, ಇಬ್ಬರ ಬಂಧನ