ಗ್ವಾಲಿಯರ್(ಮಧ್ಯಪ್ರದೇಶ): ಪ್ರೀತಿ ಕುರುಡು, ಪ್ರೇಮಕ್ಕೆ ಕಣ್ಣಿಲ್ಲ ಎಂಬ ಗಾದೆ ಮಾತಿದೆ. ಅನೇಕ ನಿದರ್ಶನಗಳಲ್ಲಿ ಈ ಮಾತು ಸಾಬೀತಾಗಿದೆ. ಅಂತಹ ಮತ್ತೊಂದು ಪ್ರಕರಣ ಇದೀಗ ಬೆಳಕಿಗೆ ಬಂದಿದೆ.
ಇಲ್ಲಿ 28 ವರ್ಷದ ಯುವಕ 67 ವರ್ಷದ ಮಹಿಳೆಯ ಜೊತೆ ಪ್ರೀತಿಯ ಬಲೆಗೆ ಬಿದ್ದಿದ್ದು, ಆಕೆಯ ಜೊತೆ ಜೀವನ ನಡೆಸಲು ಗ್ವಾಲಿಯರ್ ಕೋರ್ಟ್ ಮೆಟ್ಟಿಲೇರಿದ್ದಾನೆ. ಮಧ್ಯಪ್ರದೇಶದ ಗ್ವಾಲಿಯರ್ನ ಮೊರೆನಾದಲ್ಲಿ ನಡೆದಿರುವ ಘಟನೆ ಇದು.
ಕಳೆದ ಹಲವು ವರ್ಷಗಳಿಂದ 67 ವರ್ಷದ ರಾಮ್ ಕಾಲಿ ಮತ್ತು 28 ವರ್ಷದ ಭೋಲು ಪರಸ್ಪರ ಪ್ರೀತಿಸುತ್ತಿದ್ದಾರಂತೆ. ಮದುವೆ ಮಾಡಿಕೊಳ್ಳಲು ಇವರು ಇಷ್ಟಪಟ್ಟಿಲ್ಲ. ಆದರೆ, ಒಟ್ಟಿಗೆ ಜೀವನ (ಲಿವ್ ಇನ್ ರಿಲೇಶನ್ ಶಿಪ್) ನಡೆಸಲು ನಿರ್ಧಾರ ಮಾಡಿದ್ದಾರೆ. ಹೀಗಾಗಿ ಕೋರ್ಟ್ನಿಂದ ನೋಟರಿ ಪಡೆದುಕೊಂಡಿದ್ದಾರೆ. ಈ ಜೋಡಿ ಕೋರ್ಟ್ ಮೆಟ್ಟಿಲೇರಿರುವುದನ್ನು ನೋಡಿ ಅನೇಕರಿಗೆ ಅಚ್ಚರಿಯಾಗಿದೆ.
ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿ ಮಾಡಿದ ಭಗವಂತ್ ಮಾನ್: ₹50,000 ಕೋಟಿ ಪ್ಯಾಕೇಜ್ ಬೇಡಿಕೆ
ಈ ಬಗ್ಗೆ ಮಾತನಾಡಿರುವ ವಕೀಲ ಪ್ರದೀಪ್ ಅವಸ್ತಿ, ರಾಮಕಾಳಿ ಮತ್ತು ಭೋಲು ಒಂದೇ ಗ್ರಾಮದ ನಿವಾಸಿಗಳಾಗಿದ್ದು, ಪರಸ್ಪರ ಪ್ರೀತಿಸುತ್ತಿದ್ದಾರೆ. ಇವರಿಗೆ ಇತರರಿಂದ ಯಾವುದೇ ರೀತಿಯ ತೊಂದರೆ ಆಗಬಾರದು ಎಂಬ ಕಾರಣಕ್ಕಾಗಿ ನೋಟರಿ ಪಡೆದುಕೊಳ್ಳಲು ಮುಂದಾಗಿದ್ದಾರೆ. ಆದರೆ, ಇದಕ್ಕೆ ಯಾವುದೇ ರೀತಿಯ ಕಾನೂನು ಮಾನ್ಯತೆ ಇಲ್ಲ ಎಂದರು. ಆದರೆ, 28ರ ಯುವಕ, ವೃದ್ಧೆಯ ಜೊತೆ ಜೀವನ ನಡೆಸಲು ಮುಂದಾಗಿರುವುದು ಮಾತ್ರ ವಿಚಿತ್ರವಾಗಿದೆ ಎಂದು ಅವರು ಹೇಳಿದರು.