ಶ್ರೀನಗರ (ಜಮ್ಮು ಮತ್ತು ಕಾಶ್ಮೀರ) : ಅಮರನಾಥ ಯಾತ್ರೆಯ 31 ನೇ ದಿನವಾದ ಸೋಮವಾರ 6 ಸಾವಿರಕ್ಕೂ ಅಧಿಕ ಭಕ್ತರು ದರ್ಶನ ಪಡೆದರು. ಜುಲೈ 1 ರಿಂದ ಆರಂಭವಾಗಿರುವ ಯಾತ್ರೆಯಲ್ಲಿ ಈವರೆಗೂ 3.97 ಲಕ್ಷ ಭಕ್ತರು ಪವಿತ್ರ ಗುಹೆಯಲ್ಲಿನ ಲಿಂಗವನ್ನು ದರ್ಶಿಸಿದ್ದಾರೆ. ಇದೇ ವೇಳೆ, ಮಂಗಳವಾರ ಜಮ್ಮುವಿನಿಂದ 1,006 ಯಾತ್ರಿಕರ ಬ್ಯಾಚ್ ಗುಹಾ ದೇಗುಲ ಹೊರಟಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಒಂದು ತಿಂಗಳಿನಿಂದ ನಡೆಯುತ್ತಿರುವ ಯಾತ್ರೆಯಲ್ಲಿ ಇದುವರೆಗೆ ನಾನಾ ಕಾರಣಗಳಿಗಾಗಿ 36 ಯಾತ್ರಿಕರು ಸಾವನ್ನಪ್ಪಿದ್ದಾರೆ. 749 ಪುರುಷರು, 215 ಮಹಿಳೆಯರು, ಇಬ್ಬರು ಮಕ್ಕಳು, 37 ಸಾಧುಗಳು ಮತ್ತು ಮೂವರು ಸಾಧ್ವಿಗಳು ಸೇರಿದಂತೆ 1,006 ಯಾತ್ರಿಗಳ ಬ್ಯಾಚ್ ಜಮ್ಮುವಿನ ಭಗವತಿ ನಗರ ಯಾತ್ರಾ ನಿವಾಸದಿಂದ ಇಂದು ಬೆಳಗ್ಗೆ ಕಣಿವೆಗೆ ಬೆಂಗಾವಲು ಪಡೆಯಲ್ಲಿ ಹೊರಟಿದೆ ಎಂದು ಅಧಿಕಾರಿಗಳು ತಿಳಿಸಿದರು.
ಇಂದು ಹೊರಟಿರುವ ಯಾತ್ರಿಕರು ದಕ್ಷಿಣ ಕಾಶ್ಮೀರ ಪಹಲ್ಗಾಮ್ ಮಾರ್ಗದಿಂದ ಹಿಮಾಲಯದ ಗುಹೆಯನ್ನು ತಲುಪುತ್ತಾರೆ. ಪಹಲ್ಗಾಮ್ ಬೇಸ್ ಕ್ಯಾಂಪ್‌ನಿಂದ 43 ಕಿಲೋಮೀಟರ್‌ಗಳವರೆಗೆ ಕಡಿದಾದ ಪ್ರದೇಶವನ್ನು ಹತ್ತಬೇಕಿದೆ. ಬಳಿಕ 14 ಕಿಮೀ ದೂರ ಚಾರಣ ನಡೆಸಬೇಕು. ಉತ್ತರ ಕಾಶ್ಮೀರ ಬಾಲ್ಟಾಲ್ ಬೇಸ್ ಕ್ಯಾಂಪ್‌ನಿಂದ ಎತ್ತರದ ಪ್ರದೇಶವಿದ್ದು ಅದನ್ನು ಭಕ್ತರೆಲ್ಲರೂ ಹತ್ತಬೇಕಿದೆ.
3,888 ಮೀಟರ್ ಎತ್ತದಲ್ಲಿರುವ ದೇವಾಲಯ: ಪಹಲ್ಗಾಮ್ ಮಾರ್ಗದಿಂದ ಹೊರಟರೆ ಗುಹಾ ದೇಗುಲವನ್ನು ತಲುಪಲು 3-4 ದಿನಗಳನ್ನು ತೆಗೆದುಕೊಳ್ಳುತ್ತದೆ. ಇಲ್ಲವಾದಲ್ಲಿ ಬಾಲ್ಟಾಲ್ ಮಾರ್ಗ ಬಳಸಿ ಬಂದಲ್ಲಿ ಸಮುದ್ರ ಮಟ್ಟದಿಂದ 3,888 ಮೀಟರ್ ಎತ್ತರದಲ್ಲಿರುವ ಗುಹಾ ದೇವಾಲಯದಲ್ಲಿ ಶಿವಲಿಂಗ ದರ್ಶನ ಮಾಡಿದ ನಂತರ ಅದೇ ದಿನ ಬೇಸ್ ಕ್ಯಾಂಪ್‌ಗೆ ಹಿಂತಿರುಗಲಿದ್ದಾರೆ. ಎರಡೂ ಮಾರ್ಗಗಳಲ್ಲಿ ಅಗತ್ಯವಿರುವ ಯಾತ್ರಿಗಳಿಗೆ ಹೆಲಿಕಾಪ್ಟರ್ ಸೇವೆ ಲಭ್ಯವಿದೆ.
ಜುಲೈ 1 ರಿಂದ ಪ್ರಾರಂಭವಾಗಿರುವ ಈ ವರ್ಷದ 62 ದಿನಗಳ ಅಮರನಾಥ ಯಾತ್ರೆಯು ಆಗಸ್ಟ್ 31 ರಂದು ರಕ್ಷಾ ಬಂಧನ ಹಬ್ಬದೊಂದಿಗೆ ಶ್ರಾವಣ ಪೂರ್ಣಿಮೆಯಂದು ಕೊನೆಗೊಳ್ಳುತ್ತದೆ.
ಯಾತ್ರಾರ್ಥಿಗಳಿಗೆ ತೊಂದರೆ, ಅನಾರೋಗ್ಯ ಉಂಟಾದಲ್ಲಿ ಅವರ ರಕ್ಷಣೆಗೆ ಪಹಲ್ಗಾಮ್, ಬಾಲ್ಟಾಸ್ ಯಾತ್ರಾ ಮಾರ್ಗಗಳಲ್ಲಿ 'ಲಂಗರ್ಸ್' ಎಂಬ ಉಚಿತ ಸಮುದಾಯ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಯಾತ್ರೆ ಉದ್ದಕ್ಕೂ ಎಲ್ಲ ಜಂಕ್ ಫುಡ್‌ಗಳಿಗೆ ನಿಷೇಧವಿದೆ. ನೀರಿನ ಬಾಟಲಿ, ತಂಪು ಪಾನೀಯಗಳು, ಹಲ್ವಾಯಿ ವಸ್ತುಗಳು, ಕರಿದ ಆಹಾರಗಳು ಮತ್ತು ತಂಬಾಕು ಆಧಾರಿತ ಉತ್ಪನ್ನಗಳು ನಿಷೇಧಿತ ವಸ್ತುಗಳಾಗಿವೆ.
ಇದನ್ನೂ ಓದಿ : ಭಯೋತ್ಪಾದನೆ ಗುಂಪುಗಳಿಗೆ ಯುವಕರ ಸೇರ್ಪಡೆ: ಪುಲ್ವಾಮಾದ ಹಲವು ಕಡೆಗಳಲ್ಲಿ ಎನ್ಐಎ ದಾಳಿ, ಶೋಧ