ನವದೆಹಲಿ: ನೂತನ ಕೃಷಿ ಕಾಯ್ದೆಗಳ ವಿರುದ್ಧ ರೈತ ಸಮರ ಮುಂದುವರೆದಿದೆ. ಈ ಪ್ರತಿಭಟನೆ 60 ದಿನಗಳ ಕಾಲ ಶಾಂತಿಯುತವಾಗಿ ನಡೆದಿದ್ದು, ಇದೇ ಮೊದಲ ಬಾರಿಗೆ ಹಿಂಸಾಚಾರ ನಡೆದಿದೆ. ಈ 60 ದಿನಗಳಲ್ಲಿನ ಹೋರಾಟ ಹೇಗಿತ್ತು..? ಇಲ್ಲಿದೆ ಡಿಟೇಲ್ಸ್.
ನವೆಂಬರ್ 26: ಕೃಷಿ ಕಾಯ್ದೆಗಳ ವಿರುದ್ಧ ಪಂಜಾಬ್ ಮತ್ತು ಹರಿಯಾಣದ ರೈತ ಸಂಘಟನೆಗಳಿಂದ ನವೆಂಬರ್ 5ರಂದು ರಸ್ತೆ ತಡೆ ವಿಫಲವಾದ ಬೆನ್ನಲ್ಲೇ ದೆಹಲಿ ಚಲೋ ಆಯೋಜನೆ. ದೆಹಲಿ ಪೊಲೀಸರಿಂದ ರೈತರಿಗೆ ತಡೆ. ದೆಹಲಿ ಗಡಿಯಲ್ಲಿ ಬೀಡುಬಿಟ್ಟ ರೈತರು.
ಡಿಸೆಂಬರ್ 1: ಸುಮಾರು 35 ರೈತ ಸಂಘಟನೆಗಳು ಮತ್ತು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಜೊತೆಯಲ್ಲಿ ಮೊದಲ ಸಂಧಾನ ಸಭೆ ವಿಫಲ. ಕೃಷಿ ಕಾಯ್ದೆಗಳ ರದ್ಧತಿಗೆ ರೈತರ ಆಗ್ರಹ. ಸಂಧಾನ ವಿಫಲ.
ಡಿಸೆಂಬರ್ 3: ಮೊದಲ ಸುತ್ತಿನ ಸಂಧಾನ ಸಭೆ ವಿಫಲವಾದ ನಂತರ ಕೆಲವು ತಿದ್ದುಪಡಿಗಳ ಪ್ರಸ್ತಾವ ಮುಂದಿಟ್ಟ ಕೇಂದ್ರ ಸರ್ಕಾರ. ಒಪ್ಪದ ರೈತ ಸಂಘಟನೆಗಳಿಂದ ನೂತನ ಕಾಯ್ದೆಗಳ ರದ್ದು ಮಾಡಲು ಪಟ್ಟು.
ಡಿಸೆಂಬರ್ 5: ಐದನೇ ಸಂಧಾನ ಸಭೆಯಲ್ಲಿ ಮೌನ ವ್ರತ ಕೈಗೊಂಡ ರೈತ ಮುಖಂಡರು. ಕೇಂದ್ರದಿಂದ ಕಾಯ್ದೆ ರದ್ಧತಿ ಕುರಿತು ಒಂದು ಉತ್ತರಕ್ಕಾಗಿ ಪಟ್ಟು. ಒತ್ತಾಯಕ್ಕೆ ಮಣಿಯದ ಕೇಂದ್ರ ಸರ್ಕಾರ.
ಡಿಸೆಂಬರ್ 8: ಭಾರತ್ ಬಂದ್ಗೆ ಕರೆ ನೀಡಿದ ರೈತ ಸಂಘಟನೆಗಳು. ಪಂಜಾಬ್ ಮತ್ತು ಹರಿಯಾಣ ಸಂಪೂರ್ಣ ಸ್ತಬ್ಧ. ದೇಶದ ವಿವಿಧೆಡೆ ಮಿಶ್ರ ಪ್ರತಿಕ್ರಿಯೆ. ಕೇಂದ್ರದ ವಿರೋಧ ಪಕ್ಷಗಳಿಂದ ಬಂದ್ಗೆ ಸಾಥ್. ಬಂದ್ ನಡೆದ ಸಂಜೆ ಗೃಹ ಮಂತ್ರಿ ಅಮಿತ್ ಶಾ ಮಾತುಕತೆ ವಿಫಲ.
ಡಿಸೆಂಬರ್ 16: ದೆಹಲಿ ಗಡಿಯಲ್ಲಿ ಪ್ರತಿಭಟನಾಕಾರರ ತೆರವುಗೊಳಿಸುವ ಕುರಿತಂತೆ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್. ಅಹಿಂಸಾತ್ಮಕ ಪ್ರತಿಭಟನೆ ರೈತರ ಹಕ್ಕು ಎಂದು ಪ್ರತಿಪಾದಿಸಿದ ಸುಪ್ರೀಂ ಕೋರ್ಟ್. ಪಕ್ಷಪಾತರಹಿತ ಸಮಿತಿ ರಚಿಸುವ ಅಭಿಪ್ರಾಯ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್.
ಡಿಸೆಂಬರ್ 21: ದೆಹಲಿಯ ಗಡಿ ಭಾಗದ ಸ್ಥಳಗಳಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ಕೈಗೊಂಡ ರೈತರು. ಡಿಸೆಂಬರ್ 25ರಿಂದ 27ವರೆಗೆ ದೆಹಲಿಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಕ್ಕೆ ತಡೆಯೊಡ್ಡುವ ಬಗ್ಗೆ ಯೋಜನೆ ರೂಪಿಸುವುದಾಗಿ ಘೋಷಣೆ.
ಡಿಸೆಂಬರ್ 30: ರೈತ ಸಂಘಟನೆಗಳು ಹಾಗೂ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ನಡುವೆ ಆರನೇ ಸುತ್ತಿನ ಸಂಧಾನ ಸಭೆ. ಕೆಲವೊಂದು ಬದಲಾವಣೆಗಳಿಗೆ ಒಪ್ಪದ ರೈತ ಸಂಘಟನೆಗಳು.
ಜನವರಿ 4: ಕೇಂದ್ರ ಸರ್ಕಾರ ಮತ್ತು ರೈತರ ನಡುವೆ 7ನೇ ಸಂಧಾನ ಸಭೆ ವಿಫಲ. ಕಾಯ್ದೆಗಳ ರದ್ದತಿಯ ಪಟ್ಟು ಬಿಡದ ರೈತ ಸಂಘಟನೆಗಳು, ನಿಲುವಿಗೆ ಅಂಟಿಕೊಂಡ ಕೇಂದ್ರ ಸರ್ಕಾರ.
ಜನವರಿ 8: ಕಾಯ್ದೆ ರದ್ಧತಿ ಹೊರತಾಗಿ ಬೇರೆ ಪ್ರಸ್ತಾವಗಳೊಂದಿಗೆ ಬರುವಂತೆ ರೈತ ಸಂಘಟನೆಗಳಿಗೆ ಸೂಚಿಸಿದ ಕೇಂದ್ರ ಸರ್ಕಾರ. ಕಾನೂನು ವಾಪಸ್ ಆದ ನಂತರ ಮನೆಗೆ ವಾಪಸಾಗುವುದಾಗಿ ಘೋಷಿಸಿದ ರೈತರು.
ಜನವರಿ 12: ಹೊಸ ಕೃಷಿ ಕಾಯ್ದೆಗಳ ವಿಚಾರವಾಗಿ ಸಮಿತಿ ಜಾರಿಗೆ ತಂದ ಸುಪ್ರೀಂ ಕೋರ್ಟ್. ಕೇಂದ್ರದ ಅಧಿಕಾರಿಗಳು, ರೈತ ಸಂಘಟನೆಗಳ ಪ್ರಮುಖರ ಸಮಿತಿಗೆ ಸೂಚನೆ. ಕಾಯ್ದೆಗಳ ಜಾರಿಗೆ ತಡೆಯಾಜ್ಞೆ.
ಜನವರಿ 15: ರೈತರ ನಡುವಿನ 9ನೇ ಸುತ್ತಿನ ಮಾತುಕತೆ ವಿಫಲ. ಅವಶ್ಯಕ ತಿದ್ದುಪಡಿ ತರುವುದಾಗಿ ಘೋಷಿಸಿದ ನಂತರವೂ ಒಪ್ಪಂದ ರೈತ ಸಂಘಟನೆಗಳು.
ಜನವರಿ 21: ಬೇಕಿದ್ದಲ್ಲಿ ಒಂದೂವರೆ ವರ್ಷ ಕಾಯ್ದೆಗಳನ್ನು ಅಮಾನತಿನಲ್ಲಿಡುವುದಾಗಿ ಘೋಷಿಸಿದ ಕೇಂದ್ರ ಸರ್ಕಾರ. ಜಂಟಿ ಸಮಿತಿಯಲ್ಲಿ ರೈತ ಸಂಘಟನೆಗಳು ಪಾಲ್ಗೊಳ್ಳುವಂತೆ ಮನವಿ.
ಜನವರಿ 22: ಕಾಯ್ದೆಗಳ ಸಂಪೂರ್ಣ ರದ್ಧತಿಗೆ ಆಗ್ರಹಿಸಿದ ರೈತ ಸಂಘಟನೆಗಳು. ಮತ್ತೊಂದು ಬಾರಿ ರಸ್ತೆ ತಡೆಯುವುದಾಗಿ ರೈತ ಸಂಘಟನೆಗಳ ಹೇಳಿಕೆ. ಗಣತಂತ್ರ ದಿನದಂದು ದೆಹಲಿಗೆ ಟ್ರ್ಯಾಕ್ಟರ್ ಚಲೋ ಮಾಡುವುದಾಗಿ ಎಚ್ಚರಿಕೆ.
ಜನವರಿ 26: ಗಣರಾಜ್ಯೋತ್ಸವದ ದಿನದಂದು ದೆಹಲಿಯಲ್ಲಿ ಹಿಂಸಾರೂಪ ತಾಳಿದ ರೈತ ಸಂಘಟನೆಗಳ ಪ್ರತಿಭಟನೆ. ಸಾರಿಗೆ ವಾಹನಗಳ ಧ್ವಂಸಗೊಳಿಸಿದ ಪ್ರತಿಭಟನಾಕಾರರು. ರೈತರ ಆಕ್ರೋಶಕ್ಕೆ ಹೈರಾಣಾದ ಪೊಲೀಸರು.