ಸಂಭಾಲ್ (ಉತ್ತರ ಪ್ರದೇಶ): ಸಂಭಾಲ್ ಜಿಲ್ಲೆಯ ಆರು ರೈತ ಮುಖಂಡರಿಗೆ ನೋಟಿಸ್ ನೀಡಲಾಗಿದೆ. ಈ ರೈತರ ಕ್ರಮಗಳು ಶಾಂತಿ ಉಲ್ಲಂಘನೆಗೆ ಕಾರಣವಾಗಬಹುದು ಎಂಬ ಆತಂಕದ ಹಿನ್ನೆಲೆ 50 ಲಕ್ಷ ರೂ.ಗಳ ವೈಯಕ್ತಿಕ ಬಾಂಡ್‌ಗಳನ್ನು ನೀಡುವಂತೆ ಸೂಚಿಸಲಾಗಿದೆ.
ನೋಟಿಸ್ ನೀಡಲಾದ ಆರು ರೈತರಲ್ಲಿ ಭಾರತೀಯ ಕಿಸಾನ್ ಯೂನಿಯನ್ (ಅಸ್ಲಿ) ಜಿಲ್ಲಾಧ್ಯಕ್ಷ ರಾಜ್ಪಾಲ್ ಸಿಂಗ್ ಯಾದವ್ ಮತ್ತು ರೈತ ಮುಖಂಡರಾದ ಜೈವೀರ್ ಸಿಂಗ್, ಬ್ರಹ್ಮಚಾರಿ ಯಾದವ್, ಸತ್ಯೇಂದ್ರ, ರೋಹದಾಸ್ ಮತ್ತು ವೀರ್ ಸಿಂಗ್ ಸೇರಿದ್ದಾರೆ.
ನೋಟಿಸ್ ನೀಡಿದ ಎರಡು ದಿನಗಳ ನಂತರ ಈ ಸಂಬಂಧ ಪ್ರತಿಕ್ರಿಯಿಸಿರುವ ಸರ್ಕಲ್ ಅಧಿಕಾರಿ ಅರುಣ್ ಕುಮಾರ್ ಸಿಂಗ್ ಅವರು, 'ಕ್ಲರಿಕಲ್ ದೋಷ'ದಿಂದ ಮೊತ್ತವು 50 ಲಕ್ಷ ರೂ. ಆಗಿದೆ. ಇದನ್ನು ಕಡಿಮೆಗೊಳಿಸಲಾಗುವುದು ಎಂದಿದ್ದಾರೆ.
ಓದಿ:ಸುಮಾರು 300 ಮಿಲಿಯನ್ ಸ್ಪುಟ್ನಿಕ್ ವಿ ಡೋಸ್ ತಯಾರಿಸಲಿರುವ ಭಾರತ: ಆರ್ಡಿಐಎಫ್
"ಸಂಭಾಲ್ನ ಎಸ್‌ಡಿಎಂ ಪ್ರಸ್ತುತ ರಜೆಯಲ್ಲಿದ್ದಾರೆ. ಅವರು ಹಿಂತಿರುಗಿದ ನಂತರ ನಾವು ಈ ದೋಷ ಸರಿಪಡಿಸುತ್ತೇವೆ ಮತ್ತು ಅದನ್ನು 50,000 ರೂ.ನ ಬಾಂಡ್ ಆಗಿ ಮಾಡುತ್ತೇವೆ" ಎಂದು ಅವರು ಹೇಳಿದ್ದಾರೆ.
ಸಂಭಾಲ್ ಎಸ್‌ಡಿಎಂ ದೀಪೇಂದ್ರ ಯಾದವ್ ಅವರು ನೀಡಿರುವ ನೋಟಿಸ್‌ನಲ್ಲಿ, “ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಮತ್ತು ಇತರ ರೈತ ಆಂದೋಲನಗಳು ನಡೆಯುತ್ತಿರುವ ಹಿನ್ನೆಲೆ, ಈ ಆರು ಜನರು ಹಳ್ಳಿಯಿಂದ ಹಳ್ಳಿಗೆ ಹೋಗುತ್ತಿದ್ದಾರೆ ಮತ್ತು ರೈತರನ್ನು ಸುಳ್ಳು ಮಾಹಿತಿಯೊಂದಿಗೆ ಪ್ರಚೋದಿಸುತ್ತಿದ್ದಾರೆ. ಇದು ಶಾಂತಿ ಕದಡಲು ಕಾರಣವಾಗಬಹುದು. ಈ ನಿಟ್ಟಿನಲ್ಲಿ ರೈತರು 50 ಲಕ್ಷ ರೂ.ಗಳ ಖಾತರಿ ಮತ್ತು ಅದೇ ಹಣದ ಜಾಮೀನು ಮೊತ್ತವನ್ನು ಏಕೆ ಒದಗಿಸಬಾರದು ಎಂಬ ಕಾರಣವನ್ನು ನೀಡಿ ನೋಟಿಸ್ ನೀಡಿದ್ದರು. "
ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳಿಗೆ ಸಂಬಂಧಿಸಿದಂತೆ ರೈತರು ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.