ನವದೆಹಲಿ : ಆಂಧ್ರಪ್ರದೇಶದ ಪೋಲವರಂ ಅಣೆಕಟ್ಟು ಬಳಿ ತ್ಯಾಜ್ಯ ಎಸೆಯುವ ಕುರಿತು ಕ್ರಿಯಾ ಯೋಜನೆ ಸಿದ್ಧಪಡಿಸಲು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಆರು ಸದಸ್ಯರ ಸಮಿತಿ ರಚಿಸಿದೆ.
ಎನ್‌ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಆದರ್ಶ್ ಕುಮಾರ್ ಗೋಯೆಲ್ ನೇತೃತ್ವದ ನ್ಯಾಯಪೀಠವು ಸರಿಯಾದ ಪರಿಸರ ನಿರ್ವಹಣಾ ಯೋಜನೆ ಇಲ್ಲದೆ ಭಾರಿ ಪ್ರಮಾಣದ ತ್ಯಾಜ್ಯ ಡಂಪ್ ಮಾಡಲಾಗುತ್ತಿದೆ ಎಂದು ಅಭಿಪ್ರಾಯಟ್ಟಿದೆ.
"ಸಂಬಂಧಿತ ತಜ್ಞರ ಸಮಿತಿಯು ಸೂಕ್ತ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುವ ಮೂಲಕ ಮತ್ತು ಮಾಜಿ ನ್ಯಾಯಾಧೀಶರ ನೇತೃತ್ವದಲ್ಲಿ ಸಮಸ್ಯೆ ಬಗೆಹರಿಸುವ ಅಗತ್ಯವಿದೆ ಎಂದು ನಾವು ಕಂಡು ಕೊಂಡಿದ್ದೇವೆ" ಎಂದು ನ್ಯಾಯಪೀಠ ಹೇಳಿದೆ.
ಆಂಧ್ರದ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶರಾದ ನ್ಯಾಯಮೂರ್ತಿ ಬಿ. ಶೇಷಶಾಯನ ರೆಡ್ಡಿ, ಕೇಂದ್ರ ಪರಿಸರ ಸಚಿವಾಲಯ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ), ಕೇಂದ್ರ ಮಣ್ಣು ಮತ್ತು ಜಲ ಸಂರಕ್ಷಣಾ ಸಂಶೋಧನಾ ಸಂಸ್ಥೆ, ಹೈದರಾಬಾದ್ ಐಐಟಿ ಮತ್ತು ದೆಹಲಿ ಐಐಟಿ ನಾಮನಿರ್ದೇಶನಗಳೊಂದಿಗೆ ಎನ್‌ಜಿಟಿ ಆರು ಸದಸ್ಯರ ಸಮಿತಿ ರಚಿಸಿದೆ.