ನವದೆಹಲಿ : ಭಾರತೀಯ ಸೇನೆಯ ವಿವಿಧ ಹುದ್ದೆಗಳಲ್ಲಿರುವ 557 ಮಹಿಳಾ ಅಧಿಕಾರಿಗಳಿಗೆ ಖಾಯಂ ಆಯೋಗ(Permanent Commission) ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಸಂಸತ್ನಲ್ಲಿ ಮಾಹಿತಿ ನೀಡಿದೆ.
ಲಿಖಿತ ರೂಪದಲ್ಲಿ ಡಿಎಂಕೆ ಸಂಸದ ಎಂ ಷಣ್ಮುಗಂ ಕೇಳಿರುವ ಪ್ರಶ್ನೆಗೆ ಉತ್ತರ ನೀಡಿರುವ ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್, ಮಹಿಳಾ ಅಧಿಕಾರಿಗಳಿಗೆ ಖಾಯಂ ಆಯೋಗ ಒದಗಿಸುವಲ್ಲಿ ಕೇಂದ್ರ ಸರ್ಕಾರ ವಿಳಂಬ ಮಾಡ್ತಿಲ್ಲ.
ಕಳೆದ ಫೆಬ್ರವರಿ 17, 2020ರಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿದಾಗಿನಿಂದ ಹಿಡಿದು ಈವರೆಗೆ 557 ಮಹಿಳಾ ಅಧಿಕಾರಿಗಳಿಗೆ ಪರ್ಮನೆಂಟ್ ಕಮೀಷನ್ ನೀಡಲಾಗಿದೆ ಎಂದರು.
ಸುಪ್ರೀಂಕೋರ್ಟ್ ನಿರ್ದೇಶನದಂತೆ ನವೆಂಬರ್ 25, 2021ರಂತೆ 63 ಅರ್ಹ ಮಹಿಳಾ ಅಧಿಕಾರಿಗಳಿಗೆ ಖಾಯಂ ಆಯೋಗ ನೀಡಲಾಗಿದೆ. ಇದೀಗ ಆರು ಮಹಿಳಾ ಅಧಿಕಾರಿಗಳ ಮನವಿಯನ್ನ ಸುಪ್ರೀಂಕೋರ್ಟ್ ವಿಚಾರಣೆ ನಡೆಸುತ್ತಿದೆ ಎಂದು ತಿಳಿಸಿದೆ.
ಇದನ್ನೂ ಓದಿರಿ: ಭಾರತ-ನ್ಯೂಜಿಲ್ಯಾಂಡ್ ಟೆಸ್ಟ್ ಡ್ರಾ : ಕಿವೀಸ್ ಪ್ಲೇಯರ್ಸ್ ಕೊಂಡಾಡಿದ ಶಶಿ ತರೂರ್
ಪರ್ಮನೆಂಟ್ ಕಮೀಷನ್ (ಖಾಯಂ ಆಯೋಗ) ಎಂದರೆ ನಿವೃತ್ತಿಯ ತನಕ ಸೇನೆಯಲ್ಲಿ ಮುಂದುವರೆಯುವುದಾಗಿದೆ. ಪ್ರಸ್ತುತ ಅಧಿಕಾರಿಗಳಿಗೆ 10 ವರ್ಷಗಳವರೆಗೆ ಸೇವೆ ಸಲ್ಲಿಸುವ ಶಾರ್ಟ್ ಸರ್ವಿಸ್ ಕಮೀಷನ್ ಇದೆ. 10 ವರ್ಷಗಳ ಕೊನೆಯಲ್ಲಿ ಸೇನೆಯನ್ನು ತೊರೆಯುವ ಅಥವಾ ಖಾಯಂ ಆಯೋಗವನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿರುತ್ತದೆ.
ಈ ರೀತಿ ಶಾರ್ಟ್ ಸರ್ವಿಸ್ ಕಮೀಷನ್ ಅಡಿಯಲ್ಲಿ ಒಟ್ಟು 71 ಮಹಿಳಾ ಅಧಿಕಾರಿಗಳು ಇದ್ದು, ಇವರಿಗೆ ಖಾಯಂ ಆಯೋಗಕ್ಕೆ ಸೇರಿಸಿಕೊಳ್ಳಲು ನಿರಾಕರಿಸಲಾಗಿತ್ತು. ಹೀಗಾಗಿ, ಇವರೆಲ್ಲ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಅಕ್ಟೋಬರ್ 1ರಂದು ನ್ಯಾಯಾಲಯವು ಯಾವುದೇ ಅಧಿಕಾರಿಗಳನ್ನು ಸೇವೆಯಿಂದ ತೆಗೆಯದಂತೆ ಸರ್ಕಾರಕ್ಕೆ ತಿಳಿಸಿತ್ತು.
ಭಯೋತ್ಪಾದಕ ದಾಳಿಯ ಮಾಹಿತಿ : ಇದೇ ವೇಳೇ 2019ರಲ್ಲಿ ದೇಶದಲ್ಲಿ ಒಟ್ಟು 594 ಭಯೋತ್ಪಾದಕ ದಾಳಿಗಳು ನಡೆದಿವೆ. ಪ್ರಮುಖವಾಗಿ ಜಮ್ಮು-ಕಾಶ್ಮೀರದಲ್ಲಿ ಎಲ್ಲ ದಾಳಿ ನಡೆದಿವೆ ಎಂದು ತಿಳಿಸಿದ್ದಾರೆ. 2020ರಲ್ಲಿ ದೇಶದಲ್ಲಿ ಒಟ್ಟು 244 ಭಯೋತ್ಪಾದಕ ದಾಳಿ ನಡೆದಿವೆ.
2021ರಲ್ಲಿ ಈವರೆಗೆ ಒಟ್ಟು 196 ಭಯೋತ್ಪಾದಕ ದಾಳಿಗಳು ನಡೆದಿವೆ ಎಂದು ತಿಳಿಸಿದ್ದಾರೆ. 2019ರಿಂದ ಈವರೆಗೆ ನಡೆದಿರುವ ಉಗ್ರರ ದಾಳಿಯಲ್ಲಿ 177 ಯೋಧರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆಂದು ತಿಳಿಸಿದ್ದಾರೆ.