ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 4,282 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,750 ರಷ್ಟು ಕಡಿಮೆಯಾಗಿದ್ದು, ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ ಇಂದಿಗೆ 47,246 ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ನೀಡಿರುವ ಮಾಹಿತಿಯಲ್ಲಿ ತಿಳಿಸಲಾಗಿದೆ.
ಕೊರೊನಾದಿಂದ ಕಳೆದ 24 ಗಂಟೆಗಳಲ್ಲಿ 14 ಮಂದಿ ಸಾವನ್ನಪ್ಪಿದ್ದು, ಮೃತಪಟ್ಟವರ ಸಂಖ್ಯೆ 5,31,547 ಕ್ಕೆ ಏರಿಕೆಯಾಗಿದೆ. ಭಾನುವಾರ ಭಾರತದಲ್ಲಿ 5,874 ಕರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 49,015 ಕ್ಕೆ ಏರಿಕೆಯಾಗಿತ್ತು. ಸೋಮವಾರ ದಾಖಲಾದ ಮಾಹಿತಿಯ ಪ್ರಕಾರ ದೈನಂದಿನ ಪಾಸಿಟಿವಿಟಿ ದರ 4.92 ಪ್ರತಿಶತವಾಗಿದ್ದರೆ ವಾರದ ಪಾಸಿಟಿವಿಟಿ 4 ಪ್ರತಿಶತದಷ್ಟಿದೆ.
ಇದುವರೆಗೆ ದೇಶದಲ್ಲಿ ಒಟ್ಟು 4.49 ಕೋಟಿ (4,49,49,671) ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಸಕ್ರಿಯ ಪ್ರಕರಣಗಳು ಈಗ ಒಟ್ಟು ಸೋಂಕುಗಳ ಶೇಕಡಾ 0.11 ರಷ್ಟಿದ್ದರೆ, ರಾಷ್ಟ್ರೀಯ COVID-19 ಚೇತರಿಕೆ ದರವು 98.71 ಶೇಕಡಾ ಎಂದು ದಾಖಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ರೋಗದಿಂದ ಚೇತರಿಸಿಕೊಂಡ ಜನರ ಸಂಖ್ಯೆ 4,43,70,878 ಕ್ಕೆ ಏರಿದೆ. ಆದರೆ, ಪ್ರಕರಣದ ಸಾವಿನ ಪ್ರಮಾಣವು ಶೇಕಡಾ 1.18 ರಷ್ಟಿದೆ. ಕೇಂದ್ರ ಆರೋಗ್ಯ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ ರಾಷ್ಟ್ರವ್ಯಾಪಿ ಕೋವಿಡ್-19 ವ್ಯಾಕ್ಸಿನೇಷನ್ ಡ್ರೈವ್ ಅಡಿ ಇದುವರೆಗೆ ದೇಶದಲ್ಲಿ 220.66 ಕೋಟಿ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ.
ಇದನ್ನೂ ಓದಿ: ದೇಶದಲ್ಲಿಂದು 5,874 ಹೊಸ ಕೋವಿಡ್ ಪ್ರಕರಣಗಳು ಪತ್ತೆ