ನವದೆಹಲಿ: ಸುಪ್ರೀಂಕೋರ್ಟ್‌ನ ನಾಲ್ವರು ನ್ಯಾಯಮೂರ್ತಿಗಳು ಹಾಗು ಸಂಸತ್ ಭವನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕನಿಷ್ಠ 400 ಮಂದಿ ನೌಕರರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ತಿಳಿದು ಬಂದಿದೆ.
ಮೂಲಗಳ ಪ್ರಕಾರ, ದೆಹಲಿಯಲ್ಲಿ 20 ಸಾವಿರಕ್ಕೂ ಅಧಿಕ ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಪಾಸಿಟಿವಿಟಿ ದರ ಶೇ. 19.60ಕ್ಕೇರಿದೆ. ದೆಹಲಿಯ ಲೋಕನಾಯಕ್ ಜೈ ಪ್ರಕಾಶ್ ನಾರಾಯಣ್ (ಎಲ್‌ಎನ್‌ಜೆಪಿ) ಆಸ್ಪತ್ರೆಯ ವೈದ್ಯರು ಸಹ ಕೋವಿಡ್ ಸೋಂಕಿಗೆ ಒಳಗಾಗುತ್ತಿದ್ದಾರೆ. ಈವರೆಗೆ 11 ಮಂದಿ ವೈದ್ಯರಿಗೆ ಕೊರೊನಾ ಸೋಂಕು ತಗುಲಿದೆ ಎಂದು ತಿಳಿದು ಬಂದಿದೆ.
ಎಲ್‌ಎನ್‌ಜೆಪಿ ಆಸ್ಪತ್ರೆಯ ನಿರ್ದೇಶಕ ಡಾ.ಸುರೇಶ್ ಕುಮಾರ್ ಮಾತನಾಡಿ, ಇದುವರೆಗೆ ನಮ್ಮ ಆಸ್ಪತ್ರೆಯ 26 ಸಿಬ್ಬಂದಿಗೆ ಸೋಂಕು ತಗುಲಿದೆ. ಇವರಲ್ಲಿ 11 ವೈದ್ಯರು ಮತ್ತು ಉಳಿದವರು ನರ್ಸಿಂಗ್ ಸಿಬ್ಬಂದಿ ಮತ್ತು ಸ್ವಚ್ಛತಾ ಕಾರ್ಯಕರ್ತರು ಸೇರಿದ್ದಾರೆ ಎಂದು ಹೇಳಿದರು.
ವೀಕೆಂಡ್ ಕರ್ಫ್ಯೂ:
ಕೋವಿಡ್ ಸೋಂಕು ಹರಡುವುದನ್ನು ತಡೆಯಲು ದೆಹಲಿಯಲ್ಲಿ ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸಲಾಗಿದೆ. ರೋಗದ ತೀವ್ರ ಲಕ್ಷಣಗಳು ಕಂಡು ಬಂದರೆ ಮಾತ್ರ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಿರಿ. ಕಡಿಮೆ ಲಕ್ಷಣಗಳು ಕಂಡು ಬಂದರೆ ಮನೆಯಲ್ಲಿ ಪ್ರತ್ಯೇಕವಾಗಿ ಉಳಿಯುವ ಮೂಲಕ ಚಿಕಿತ್ಸೆ ಪಡೆಯಿರಿ. ಮಾಸ್ಕ್ ಧರಿಸಿ ಮತ್ತು ಕೋವಿಡ್-19 ಗೆ ಸಂಬಂಧಿಸಿದ ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸಿ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಟ್ವೀಟ್ ಮಾಡಿದ್ದಾರೆ.
ದೇಶದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳಲ್ಲಿ ಮಹಾರಾಷ್ಟ್ರ ಅಗ್ರಸ್ಥಾನದಲ್ಲಿದೆ. ರಾಜ್ಯಾದ್ಯಂತ 7.97 ಲಕ್ಷಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗಿವೆ. ಮುಂಬೈನಲ್ಲಿ ಕಳೆದ 24 ಗಂಟೆಗಳಲ್ಲಿ 20,318 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಐವರು ಸಾವನ್ನಪ್ಪಿದ್ದಾರೆ. ದೇಶದಲ್ಲಿ 1 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿದ್ದು, ದೈನಂದಿನ ಪಾಸಿಟಿವಿಟಿ ದರ ಶೇ. 9.28 ಕ್ಕೆ ಏರಿದೆ.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಕೋವಿಡ್ ಸ್ಫೋಟ: ಫೆ.15ರವರೆಗೆ ಶಾಲಾ-ಕಾಲೇಜ್ ಕ್ಲೋಸ್