ರಾಜ್ಯಸಭೆಯು ದೇಶದ ಸಂಸತ್ತಿನ ಮೇಲ್ಮನೆ, ಹಿರಿಯರ ಮನೆ ಎಂಬೆಲ್ಲ ಹಿರಿಮೆ ಹೊಂದಿದೆ. ಆದರೆ, ಇಂತಹ ರಾಜ್ಯಸಭೆಗೆ ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಗಳು ಪ್ರವೇಶಿಸುತ್ತಿದ್ದಾರೆ. ಇತ್ತೀಚಿಗೆ ಆಯ್ಕೆಯಾದ 57 ನೂತನ ಸದಸ್ಯರಲ್ಲಿ ಶೇ.40ರಷ್ಟು ಎಂದರೆ 23 ಮಂದಿ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.
ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಸದಸ್ಯರು ಸಲ್ಲಿಸಿದ ಅಫಿಡವಿಟ್ನಲ್ಲೇ ಈ ಮಾಹಿತಿ ಇದೆ. ನ್ಯಾಷನಲ್ ಎಲೆಕ್ಷನ್ ವಾಚ್ ಮತ್ತು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರೈಟ್ಸ್ (ಎಡಿಆರ್) ಎಂಬ ಸಂಸ್ಥೆಗಳು ಆ ಅಫಿಡವಿಚ್ ಆಧಾರದ ಮೇಲೆ ತಯಾರಿಸಿದ ಸಮೀಕ್ಷಾ ವರದಿಯನ್ನು ಗುರುವಾರ ಬಿಡುಗಡೆ ಮಾಡಿವೆ.
12 ಜನರ ವಿರುದ್ಧ ಗಂಭೀರ ಕ್ರಿಮಿನಲ್ ಕೇಸ್: ವಿವಿಧ ರಾಜ್ಯಗಳಿಂದ ರಾಜ್ಯಸಭೆಗೆ ವಿವಿಧ ಪಕ್ಷಗಳ 57 ಜನ ಸದಸ್ಯರು ಆಯ್ಕೆಯಾಗಿದ್ದಾರೆ. ಇದರಲ್ಲಿ 23 ಜನರು (ಶೇ.40ರಷ್ಟು) ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳು ಇವೆ ಎಂದು ಹೇಳಿಕೊಂಡಿದ್ದಾರೆ. ಇನ್ನು, 12 ಮಂದಿ ತಮ್ಮ ವಿರುದ್ಧ ಕೊಲೆ, ಕೊಲೆ ಯತ್ನ, ಕಳ್ಳತನದಂತಹ ಗಂಭೀರ ಕ್ರಿಮಿನಲ್ ಕೇಸ್ಗಳಿವೆ ಎಂದು ಹೇಳಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.
ಯಾವ ಪಕ್ಷದವರು ಎಷ್ಟು ಜನ?: ಪಕ್ಷವಾರು ಸದಸ್ಯರ ಮಾಹಿತಿಯನ್ನೂ ಈ ವರದಿ ವಿಶ್ಲೇಷಿಸಿದೆ. ಬಿಜೆಪಿಯ 22 ಜನರ ಪೈಕಿ 9 ಜನರ ವಿರುದ್ಧ ಕ್ರಿಮಿನಲ್ ಕೇಸ್ಗಳಿವೆ. ಅದೇ ರೀತಿಯಾಗಿ ಕಾಂಗ್ರೆಸ್ನ 9 ಜನರ ಪೈಕಿ 4, ಟಿಆರ್ಎಸ್ ಮತ್ತು ಆರ್ಜೆಡಿ ತಲಾ ಇಬ್ಬರು, ವೈಎಸ್ಆರ್ ಕಾಂಗ್ರೆಸ್, ಡಿಎಂಕೆ, ಎಐಎಡಿಎಂಕೆ, ಸಮಾಜವಾದಿ ಪಕ್ಷದ ಒಬ್ಬ ಸದಸ್ಯ ಹಾಗೂ ಓರ್ವ ಸ್ವತಂತ್ರ ಅಭ್ಯರ್ಥಿ ಕೂಡ ವಿರುದ್ಧ ಕ್ರಿಮಿನಲ್ ಕೇಸ್ ಇರುವುದಾಗಿ ಹೇಳಿದೆ.
ಯಾವ ರಾಜ್ಯದ ಎಷ್ಟು ಸದಸ್ಯರು?: ಉತ್ತರ ಪ್ರದೇಶದಿಂದ ಆಯ್ಕೆಯಾದ 11 ಜನರಲ್ಲಿ 6, ಮಹಾರಾಷ್ಟ್ರದ ಆರು ಮಂದಿ ಪೈಕಿ 4, ತಮಿಳುನಾಡಿನ 6 ಜನರ ಪೈಕಿ 3, ಬಿಹಾರದ 5 ಮಂದಿ ಪೈಕಿ 4, ತೆಲಂಗಾಣದಿಂದ ಆಯ್ಕೆಯಾದ ಇಬ್ಬರೂ ಸದಸ್ಯರ ವಿರುದ್ಧ ಕ್ರಿಮಿನಲ್ ಕೇಸ್ ಇದೆ. ಆಂಧ್ರಪ್ರದೇಶದ ನಾಲ್ವರಲ್ಲಿ ಒಬ್ಬರು, ಛತ್ತೀಸ್ಗಢದ ಇಬ್ಬರಲ್ಲಿ ಒಬ್ಬರು, ರಾಜಸ್ಥಾನದ ನಾಲ್ವರಲ್ಲಿ ಒಬ್ಬರು, ಹರಿಯಾಣದ ಇಬ್ಬರ ಪೈಕಿ ಒಬ್ಬರ ವಿರುದ್ಧ ಇಂತಹ ಪ್ರಕರಣ ಇದೆ.
ಶೇ.93ರಷ್ಟು ಸದಸ್ಯರು ಕೋಟ್ಯಧೀಶರು: ನೂತನ ರಾಜ್ಯಸಭೆ ಸದಸ್ಯರಲ್ಲಿ ಶೇ.93ರಷ್ಟು ಎಂದರೆ 53 ಜನರು ಕೋಟ್ಯಧೀಶರಾಗಿದ್ದಾರೆ. ಅದರಲ್ಲೂ, ಟಿಆರ್ಎಸ್ನ ಬಂಡಿ ಪಾರ್ಥ ಸಾರಥಿ 5,300 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಸ್ವತಂತ್ರ ಅಭ್ಯರ್ಥಿಯಾದ ಕಪಿಲ್ ಸಿಬಲ್ 608 ಕೋಟಿ ರೂ. ಹಾಗೂ ಆಪ್ನ ವಿಕ್ರಮ್‌ಜಿತ್ ಸಿಂಗ್ 498 ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಹೊಸದಾಗಿ ಆಯ್ಕೆಯಾದ ಸದಸ್ಯರ ಸರಾಸರಿ ಆಸ್ತಿ ಮೌಲ್ಯ 154.27 ಕೋಟಿ ರೂ.ಗಳಾಗಿದೆ.
ಇದನ್ನೂ ಓದಿ: ವಡಾಪಾವ್ ಎಂದು 100 ಗ್ರಾಂ ಚಿನ್ನಾಭರಣ ಕೊಟ್ಟ ಮಾಲಕಿ; ಒಣ ಬ್ರೆಡ್ ಎಂದು ಕಸದ ರಾಶಿಗೆಸೆದು ಹೋದ ಭಿಕ್ಷುಕಿ!