ಕುರುಕ್ಷೇತ್ರ (ಹರಿಯಾಣ): ಇಲ್ಲಿನ ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆದ ಚುನಾವಣಾ ಫಲಿತಾಂಶಗಳು ಬುಧವಾರ ಪ್ರಕಟವಾಗಿವೆ. ಕುರುಕ್ಷೇತ್ರ ಜಿಲ್ಲೆಯ ಲಾಡವಾ ನಗರ ಪಾಲಿಕೆ ಚೇರಮನ್ ಹುದ್ದೆಗೆ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಸಾಕ್ಷಿ ಖುರಾನಾ ಜಯಿಸಿದ್ದಾರೆ. ಸಾಕ್ಷಿ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸುಮೀತ್ ಬನ್ಸಲ್ 4402 ಮತ ಪಡೆದರೆ, ಸಾಕ್ಷಿ 5818 ಮತಗಳನ್ನು ಪಡೆದರು. ಈ ಮುಂಚೆಯೂ ಸಾಕ್ಷಿ ಖುರಾನಾ 5 ವರ್ಷಗಳ ಕಾಲ ನಗರ ಪಾಲಿಕೆಯ ಅಧ್ಯಕ್ಷೆಯಾಗಿದ್ದರು.
ಈ ಚುನಾವಣೆಯಲ್ಲಿ ಸಾಕ್ಷಿ ಖುರಾನಾ ಅವರೊಂದಿಗೆ ಅವರದೇ ಕುಟುಂಬದ ಇನ್ನೂ ಮೂವರು ಜಯಗಳಿಸಿದ್ದು ಬಹಳ ವಿಶೇಷವಾಗಿದೆ. ಸಾಕ್ಷಿ ಜಯಿಸಿದ ಲಾಡವಾ ನಗರ ಪಾಲಿಕೆ ಚುನಾವಣೆಯಲ್ಲಿ ಅವರ ಪತಿ ಅಮಿತ ಖುರಾನಾ, ನಾದಿನಿ ಮತ್ತು ಅತ್ತೆ ಕೂಡ ಜಯ ದಾಖಲಿಸಿದ್ದಾರೆ. ಒಂದೇ ಕುಟುಂಬದ ನಾಲ್ವರು ಜಯಗಳಿಸಿದ್ದಕ್ಕೆ ಸ್ಥಳೀಯರು ಸಂಭ್ರಮಾಚರಣೆ ಮಾಡಿದರು.