ನವದೆಹಲಿ : ಇನ್ನೂ 4 ಭಾರತೀಯ ಫಾರ್ಮಾ ಸಂಸ್ಥೆಗಳು ಕೊರೊನಾ ವೈರಸ್ ವಿರೋಧಿ ಲಸಿಕೆ ಉತ್ಪಾದನೆಯನ್ನು ಅಕ್ಟೋಬರ್-ನವೆಂಬರ್ ವೇಳೆಗೆ ಆರಂಭಿಸುವ ನಿರೀಕ್ಷೆಯಿದೆ. ಇದು ಚುಚ್ಚುಮದ್ದು ಚುರುಕುಗೊಳಿಸುವಿಕೆಯ ವೇಗ ಹೆಚ್ಚಿಸುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಇಂದು ಸಂಸತ್ತಿಗೆ ತಿಳಿಸಿದ್ದಾರೆ.
ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ವೇಳೆ ಮಾತನಾಡಿದ ಅವರು, ಭಾರತವು ಈವರೆಗೆ 47 ಕೋಟಿ ಡೋಸ್ ಲಸಿಕೆ ನೀಡಿದೆ. ಇಡೀ ದೇಶದಲ್ಲಿ ಅತಿ ಬೇಗನೆ ಲಸಿಕೆ ಹಾಕಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಹೇಳಿದರು. 7ರಿಂದ 9 ಪ್ರತಿಶತದಷ್ಟು ಡೋಸ್‌ಗಳನ್ನು ಖಾಸಗಿ ಆಸ್ಪತ್ರೆಗಳು ಬಳಸದೇ ಉಳಿದಿರುವುದನ್ನ ಸರ್ಕಾರಿ ಲಸಿಕೆ ಕೇಂದ್ರಗಳು ಬಳಸುತ್ತಿವೆ ಎಂದರು.
ಮಾಂಡವೀಯಾ ಅವರು ಪೆಗಾಸಸ್ ಸಮಸ್ಯೆ ಮತ್ತು ಕೃಷಿ ಕಾಯ್ದೆಗಳ ಕುರಿತು ಚರ್ಚೆಗೆ ಪ್ರತಿಪಕ್ಷಗಳ ಬೇಡಿಕೆಯ ಬಗ್ಗೆ ಸದನದಲ್ಲಿ ಗದ್ದಲದ ನಡುವೆ ಮಾತನಾಡಿದರು. ಲಸಿಕೆ ನೀಡುವ ಅಭಿಯಾನ ಸುಗಮವಾಗಿ ನಡೆಯುತ್ತಿದೆ. ಮುಂಬರುವ ದಿನಗಳಲ್ಲಿ ಇನ್ನೂ ನಾಲ್ಕು ಭಾರತೀಯ ಕಂಪನಿಗಳು ಉತ್ಪಾದನೆ ಹೆಚ್ಚಿಸುವುದರೊಂದಿಗೆ ಇನ್ನಷ್ಟು ವೇಗ ಪಡೆಯಲಿದೆ.
ಅಕ್ಟೋಬರ್-ನವೆಂಬರ್ ವೇಳೆಗೆ ಇನ್ನೂ ನಾಲ್ಕು ಭಾರತೀಯ ಔಷಧೀಯ ಕಂಪನಿಗಳು ದೇಶೀಯ ಲಸಿಕೆಗಳ ಉತ್ಪಾದನೆ ಆರಂಭಿಸಬಹುದೆಂದು ಸರ್ಕಾರ ನಿರೀಕ್ಷಿಸುತ್ತದೆ. ಇದು ದೇಶೀಯ ಬೇಡಿಕೆ ಪೂರೈಸಲು ಸಹಾಯ ಮಾಡುತ್ತದೆ ಎಂದು ವಿವರಿಸಿದರು.
ಇದನ್ನೂ ಓದಿ: ದೇಶದಲ್ಲಿ ಲಸಿಕೆ ಕೊರತೆಯಿಲ್ಲ, ನಿಮಗೆ ಪ್ರಬುದ್ಧತೆಯಿಲ್ಲ : ರಾಗಾಗೆ ಆರೋಗ್ಯ ಸಚಿವರ ತಿರುಗೇಟು
ಜೈಡಸ್ ಕ್ಯಾಡಿಲಾ ಶೀಘ್ರದಲ್ಲೇ ತಜ್ಞರ ಸಮಿತಿಯಿಂದ ತುರ್ತು ಬಳಕೆಯ ಅನುಮತಿ ಪಡೆಯುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವರು ಹೇಳಿದರು. ಪ್ರಸ್ತುತ, ಎರಡು ಕಂಪನಿಗಳು (ಭಾರತ್ ಬಯೋಟೆಕ್ ಮತ್ತು ಸೀರಮ್ ಸಂಸ್ಥೆ) ಸರ್ಕಾರಕ್ಕೆ ಲಸಿಕೆಯನ್ನು ಪೂರೈಸುತ್ತಿವೆ. ಸ್ಪುಟ್ನಿಕ್ ಲಸಿಕೆ ಕೂಡ ಲಭ್ಯವಿದೆ. ಇದರ ಉತ್ಪಾದನೆ ದೇಶದಲ್ಲಿ ಆರಂಭವಾಗಿದೆ ಎಂದರು. ಬಿಜೆಡಿ ಸದಸ್ಯ ಅಮರ್ ಪಟ್ನಾಯಕ್ ಅವರು 12-18 ವರ್ಷ ವಯಸ್ಸಿನ ಲಸಿಕೆ ಬಿಡುಗಡೆ ಯೋಜನೆ ಮತ್ತು 3ನೇ ಅಥವಾ 4ನೇ ಡೋಸ್ ಅಗತ್ಯತೆಯ ಬಗ್ಗೆ ಕೇಳಿದ ಪ್ರಶ್ನೆಗೆ, ಮಾಂಡವೀಯಾ ಈ ಮಾಹಿತಿ ನೀಡಿದರು.