ನೋಯ್ಡಾ (ಉತ್ತರ ಪ್ರದೇಶ): ನಗರದಲ್ಲಿ ಭಾರೀ ಅಪಘಾತ ಸಂಭವಿಸಿದೆ. ಇಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಲಿಫ್ಟ್ ಕುಸಿದು ಬಿದ್ದಿದೆ. ಈ ಅಪಘಾತದಲ್ಲಿ 4 ಮಂದಿ ಸಾವನ್ನಪ್ಪಿದ್ದು, ಐವರಿಗೆ ಗಾಯಗಳಾಗಿವೆ. ಮೃತಪಟ್ಟವರೂ ಮತ್ತು ಗಾಯಾಳುಗಳ ಕೂಲಿಕಾರ್ಮಿಕರಾಗಿದ್ದಾರೆ.ಎಲ್ಲಾ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಗ್ರೇಟರ್ ನೋಯ್ಡಾದಲ್ಲಿ ಶುಕ್ರವಾರ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಲಿಫ್ಟ್ ನೆಲಕ್ಕೆ ಕುಸಿಬಿದ್ದ ಪರಿಣಾಮ ನಾಲ್ವರು ಮೃತಪಟ್ಟಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಗ್ರೇಟರ್ ನೋಯ್ಡಾದ ಜಿಲ್ಲಾ ಮ್ಯಾಜಿಸ್ಟ್ರೇಟ್ ಮನೀಶ್ ವರ್ಮಾ ತಿಳಿಸಿದ್ದಾರೆ. ಗ್ರೇಟರ್ ನೋಯ್ಡಾ ವೆಸ್ಟ್‌ನಲ್ಲಿರುವ ಡ್ರೀಮ್ ವ್ಯಾಲಿ ಪ್ರಾಜೆಕ್ಟ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ಸೈಟ್‌ನಲ್ಲಿ ಕೆಲಸ ನಡೆಯುತ್ತಿದೆ. ಸ್ಥಳದಲ್ಲಿ ಕೆಲಸ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಲಿಫ್ಟ್ ಕುಸಿದು ಬಿದ್ದಿದೆ. ಲಿಫ್ಟ್‌ನಲ್ಲಿ ಸಾಕಷ್ಟು ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸುತ್ತಿದ್ದಾರೆ.
ಇನ್ನು ಲಿಫ್ಟ್ ಕುಸಿಯುತ್ತಿದ್ದಂತೆ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಕೂಡಲೇ ಸ್ಥಳೀಯ ಕೂಲಿ ಕಾರ್ಮಿಕರು ಗಾಯಗೊಂಡ ಮತ್ತು ಮೃತಪಟ್ಟವರನ್ನು ಲಿಫ್ಟ್ನಿಂದ ಹೊರ ತೆಗೆದರು. ಬಳಿಕ ಪೊಲೀಸರಿಗೆ ಮತ್ತು ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದರು. ಸುದ್ದಿ ತಿಳಿದಾಕ್ಷಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು. ಆಂಬ್ಯುಲೆನ್ಸ್ ಸಹ ಸ್ಥಳಕ್ಕೆ ದೌಡಾಯಿಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದವು.
''ಗ್ರೇಟರ್ ನೋಯ್ಡಾದ ಆಮ್ರಪಾಲಿ ಬಿಲ್ಡರ್ಸ್ ನಿರ್ಮಾಣ ಸ್ಥಳದಲ್ಲಿ ಇದ್ದಕ್ಕಿದ್ದಂತೆ ಲಿಫ್ಟ್ ಕುಸಿದು ಬಿದ್ದಿದೆ. ನಾಲ್ಕು ಜನರು ಸಾವನ್ನಪ್ಪಿದ್ದಾರೆ ಹಾಗೂ ಇನ್ನೂ ಐವರು ನಗರದ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದಾರೆ. ಘಟನೆಯ ಕುರಿತು ತನಿಖೆ ನಡೆಯುತ್ತಿದೆ. ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯಲ್ಲಿ ಪೊಲೀಸ್ ತಂಡವಿದೆ. ಮತ್ತೊಂದು ತಂಡವು ಅಪಘಾತದ ಸ್ಥಳದಲ್ಲಿದೆ. ಸದ್ಯ ಲಿಫ್ಟ್‌ನಲ್ಲಿ ಯಾರೂ ಸಿಲುಕಿಕೊಂಡಿಲ್ಲ. ನಾವು ಗಾಯಾಳುಗಳಿಗೆ ಸರಿಯಾದ ಚಿಕಿತ್ಸೆ ನೀಡಲು ತಿಳಿಸಲಾಗಿದೆ'' ಎಂದು ಡಿಎಂ ಮನೀಶ್ ವರ್ಮಾ ಮಾಹಿತಿ ನೀಡಿದ್ದಾರೆ.
ಸೆಕ್ಟರ್ 150 ಭಗತ್ ಸಿಂಗ್ ಪಾರ್ಕ್ ಬಳಿ ಎಎಸ್ ಗ್ರೂಪ್‌ನ ಸ್ಪಾರ್ಕ್ ನ್ಯೂ ಪ್ರಾಜೆಕ್ಟ್ ಕೆಲಸ ನಡೆಯುತ್ತಿದೆ. ನಿರ್ಮಾಣವಾಗುತ್ತಿದ್ದ ಕಟ್ಟಡದಲ್ಲಿ ಸ್ಪಾರ್ಟನ್ ಕಂಪನಿಯಿಂದ ತಾತ್ಕಾಲಿಕ ಲಿಫ್ಟ್ ಅಳವಡಿಸಲಾಗಿತ್ತು. ಥೈಸೆನ್ ಕಂಪನಿಯ ಶಾಶ್ವತ ಲಿಫ್ಟ್ ಅನ್ನು ಸ್ಥಾಪಿಸಿದ ನಂತರ, ಟವರ್ ನಂಬರ್ ಒಂದರಿಂದ ತಾತ್ಕಾಲಿಕ ಲಿಫ್ಟ್ ಅನ್ನು ತೆಗೆದುಹಾಕಲಾಗುತ್ತಿತ್ತು. ಈ ವೇಳೆ ಅಪಘಾತ ಸಂಭವಿಸಿದೆ ಎಂದು ಹೆಚ್ಚುವರಿ ಡಿಸಿಪಿ ದಿನೇಶ್ ಕುಮಾರ್ ತಿಳಿಸಿದ್ದರು.
ಇದನ್ನೂ ಓದಿ: ಒಡಿಶಾದಲ್ಲಿ ಸ್ಕ್ರಬ್ ಟೈಫಸ್ ಸೋಂಕು ಉಲ್ಬಣ: ಐವರು ಸಾವು