ಪಾಟ್ನಾ(ಬಿಹಾರ್) : ಹೋಳಿ ಹಬ್ಬದ ಆಚರಣೆಯ ವೇಳೆ ನಕಲಿ ಮದ್ಯ ಸೇವಿಸಿ 37 ಮಂದಿ ಸಾವನಪ್ಪಿರುವ ಘಟನೆ ಪಾಟ್ನಾದಲ್ಲಿ ನಡೆದಿದೆ.
ಬಿಹಾರ ಪೊಲೀಸ್ ಅಧಿಕಾರಿಯ ಹೇಳಿರುವ ಪ್ರಕಾರ, ಹೋಳಿ ದಿನದಿಂದ ಬಿಹಾರದ ಮೂರು ಜಿಲ್ಲೆಗಳಲ್ಲಿ ಈವರೆಗೆ 37 ಜನರು ನಕಲಿ ಮದ್ಯ ಸೇವಿಸಿ ಸಾವನ್ನಪ್ಪಿದ್ದಾರೆ. ಭಾಗಲ್ಪುರ ಜಿಲ್ಲೆಯಲ್ಲಿ ಗರಿಷ್ಠ ಸಂಖ್ಯೆಯ ಸಾವುಗಳು ಸಂಭವಿಸಿವೆ.
ಶನಿವಾರ ಬೆಳಗ್ಗೆಯಿಂದ ಈವರೆಗೆ 22 ಜನರು ಸಾವನ್ನಪ್ಪಿದ್ದಾರೆ. ಅಲ್ಲದೇ ಬಂಕಾ ಜಿಲ್ಲೆಯಲ್ಲಿ 12 ಮಂದಿ ಹಾಗೂ ಮಾಧೇಪುರದಲ್ಲಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ.
ಸಾವಿಗೆ ನಿಖರ ಕಾರಣ ಪತ್ತೆ ಹಚ್ಚಲು ತನಿಖೆ ನಡೆಯುತ್ತಿದೆ. ಪ್ರಾಥಮಿಕ ತನಿಖೆಯ ಪ್ರಕಾರ ಕೆಲವರು ವಿಷಪೂರಿತ ಮದ್ಯ ಸೇವಿಸಿ ಸಾವನ್ನಪ್ಪಿದ್ದರೆ, ಇನ್ನೂ ಕೆಲವರು ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿಯ ನಂತರ ನಿಖರ ಮಾಹಿತಿ ತಿಳಿದು ಬರಬೇಕಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೋಳಿ ಹಬ್ಬದಂದು ಶುಕ್ರವಾರ ಸಂಜೆ ಮತ್ತು ಶನಿವಾರ ಬೆಳಗ್ಗೆ ಮದ್ಯ ಸೇವಿಸಿದ್ದು, ಅಂದಿನಿಂದ ಅವರ ಆರೋಗ್ಯ ಹದಗೆಟ್ಟಿದೆ ಎಂದು ಸಂತ್ರಸ್ತರ ಕುಟುಂಬಸ್ಥರು ಹೇಳಿದ್ದಾರೆ. ಸಂತ್ರಸ್ತರು ವಾಂತಿ ಮತ್ತು ಹೊಟ್ಟೆ ನೋವಿನಿಂದ ಬಳಲುತಿದ್ದರು. ಅವರನ್ನು ಭಾಗಲ್ಪುರ, ಬಂಕಾ ಮತ್ತು ಮಾಧೇಪುರದ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿತ್ತು.
ಕನೋಜ್ನಲ್ಲಿ ಒಂದೇ ಕುಟುಂಬದ ಮೂವರ ಸಾವು : ಛಿಬ್ರಮೌ ಕೊಟ್ವಾಲಿ ಪ್ರದೇಶದ ಕಟಾಹರ್ ಗ್ರಾಮದಲ್ಲಿ ಒಂದೇ ಕುಟುಂಬದ ಮೂವರು ನಕಲಿ ಮದ್ಯ ಸೇವಿಸಿ ಸಾವನ್ನಪ್ಪಿದ್ದಾರೆ. ಮಾಹಿತಿ ತಿಳಿದ ತಕ್ಷಣ ಎಸ್ಪಿ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಾಹಿತಿ ಪ್ರಕಾರ, ಜಿಲ್ಲೆಯ ಕಟಹಾರ್ ಗ್ರಾಮದ ನಿವಾಸಿ ಅಮಿತ್ (30), ಅವರ ತಂದೆ ಜಸ್ಕರನ್ ಮತ್ತು ಸೋದರ ಸಂಬಂಧಿ ರಾಕೇಶ್ (70) ಮತ್ತೊಬ್ಬ ವ್ಯಕ್ತಿಯೊಂದಿಗೆ ಮದ್ಯ ಸೇವಿಸಿದ್ದರು. ಇದಾದ ಬಳಿಕ ಶನಿವಾರ ರಾತ್ರಿ ಅಮಿತ್ ಅವರ ಆರೋಗ್ಯ ಹದಗೆಟ್ಟಿತ್ತು. ಕುಟುಂಬಸ್ಥರು ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಅಮಿತ್ ಸಾವನ್ನಪ್ಪಿದ್ದಾರೆ.
ಬಳಿಕ ಪೊಲೀಸರಿಗೆ ಮಾಹಿತಿ ನೀಡದೆ ಸಂಬಂಧಿಕರು ಶವವನ್ನು ಸುಟ್ಟು ಹಾಕಿದ್ದಾರೆ. ಭಾನುವಾರ ಮಧ್ಯಾಹ್ನ ತಂದೆ ಜಸ್ಕರನ್ ಮತ್ತು ರಾಕೇಶ್ ಅವರ ಸ್ಥಿತಿಯೂ ಗಂಭೀರವಾಗಿತ್ತು. ಸಂಬಂಧಿಕರು ಇಬ್ಬರನ್ನೂ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ದಾರಿ ಮಧ್ಯೆ ಇಬ್ಬರೂ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಗ್ರಾಮದ ನಿವಾಸಿಗಳಾದ ಆಸಿಕ್ ಮತ್ತು ಪ್ರಾಂಶು ಎಂಬುವರು ಮದ್ಯದಲ್ಲಿ ವಿಷ ಬೆರೆಸಿ ಕುಡಿಸಿದ್ದಾರೆ ಎಂದು ಮೃತ ಅಮಿತ್ ಅವರ ಪತ್ನಿ ಆರತಿ ಆರೋಪಿಸಿದ್ದಾರೆ.
ಇದನ್ನೂ ಓದಿ: ನಕಲಿ ಮದ್ಯ ಸೇವಿಸಿ 13 ಜನ ಸಾವು: ಘಟನೆ ಮರೆಯಾಚಲು ಹೋಗಿ ಕಣ್ಣು ಕಳೆದುಕೊಂಡ ಇಬ್ಬರು!