ಲಖನೌ: ಇತ್ತೀಚಿನ ವಿಧಾನಸಭಾ ಚುನಾವಣಾ ಫಲಿತಾಂಶದ ನಂತರ ರಾಜ್ಯದಲ್ಲಿ ಪಕ್ಷದ 37 ಕಾರ್ಯಕರ್ತರು ಹತ್ಯೆಯಾಗಿದ್ದಾರೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಆರೋಪಿಸಿದ್ದಾರೆ.
ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣಾ ಫಲಿತಾಂಶದ ಬಗ್ಗೆ ನಡೆದ ಸಭೆಯಲ್ಲಿ ದಿಲೀಪ್ ಘೋಷ್ ಮಾತನಾಡಿದರು. ತೃಣಮೂಲ ಕಾಂಗ್ರೆಸ್ ರಾಜ್ಯದಲ್ಲಿ ಹಿಂಸಾಚಾರವನ್ನು ಉತ್ತೇಜಿಸುತ್ತಿದೆ ಎಂದು ಸಭೆ ಆರೋಪಿಸಿದ್ದಾರೆ.
ಪಶ್ಚಿಮ ಬಂಗಾಳ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ಜೊತೆ ನಡೆದ ಸಭೆಯಲ್ಲಿ ಪಕ್ಷದ ವ್ಯವಹಾರಗಳ ಉಸ್ತುವಾರಿ ರಾಧಾ ಮೋಹನ್ ಸಿಂಗ್, ಉತ್ತರ ಪ್ರದೇಶದ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಮತ್ತು ಪ್ರಧಾನ ಕಾರ್ಯದರ್ಶಿ (ಸಂಸ್ಥೆ) ಸುನಿಲ್ ಬನ್ಸಾಲ್ ಭಾಗವಹಿಸಿದ್ದರು ಎಂದು ಯುಪಿ ಬಿಜೆಪಿ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸಭೆಯ ಮೊದಲಿಗೆ ಪಕ್ಷದ ಉತ್ತರ ಪ್ರದೇಶ ಘಟಕದ ಕಾರ್ಯಕರ್ತರಿಗೆ ಮತ್ತು ಪದಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದ ಘೋಷ್, ಪಶ್ಚಿಮ ಬಂಗಾಳದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ನಿಮ್ಮ ಶ್ರಮದಿಂದಾಗಿ 77 ಸ್ಥಾನಗಳನ್ನು ಗೆದ್ದಿದ್ದೇವೆ ಎಂದು ಹೇಳಿದರು.
ಕ್ರಾಂತಿಕಾರಿಗಳು, ಆಧ್ಯಾತ್ಮಿಕ ಮುಖಂಡರು, ಸಾಮಾಜಿಕ ಸುಧಾರಕರೊಂದಿಗೆ ಗುರುತಿಸಲ್ಪಟ್ಟಿರುವ ಪಶ್ಚಿಮ ಬಂಗಾಳ ಇಂದು ದುರದೃಷ್ಟವಶಾತ್ ರಕ್ತಪಾತವನ್ನು ಎದುರಿಸುತ್ತಿದೆ ಎಂದರು.
ರಾಜ್ಯದ ಯಾವುದೇ ಪಕ್ಷದ ಕೆಲಸಕ್ಕಾಗಿ ಬಿಜೆಪಿ ಕಾರ್ಯಕರ್ತರು ಮನೆಗಳಿಂದ ಹೊರ ನಡೆದಾಗ ಅವರು ಹಿಂತಿರುಗುತ್ತಾರೋ ಅಥವಾ ಇಲ್ಲವೋ ಎಂಬುದು ಗೊತ್ತಾಗ್ತಿಲ್ಲ. ಕಳೆದ ಐದು ವರ್ಷಗಳಲ್ಲಿ ಬಿಜೆಪಿಯ 166 ಕಾರ್ಯಕರ್ತರು ಹತರಾಗಿದ್ದಾರೆ. ಇತ್ತೀಚಿನ ವಿಧಾನಸಭಾ ಚುನಾವಣೆಯ ಫಲಿತಾಂಶ ಘೋಷಣೆಯ ನಂತರ ಪಕ್ಷದ 37 ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ. ಕಳೆದ ಐದು ವರ್ಷಗಳಲ್ಲಿ ನಮ್ಮ ಕಾರ್ಯಕರ್ತರ ವಿರುದ್ಧ 30,000 ಪ್ರಕರಣಗಳು ದಾಖಲಾಗಿವೆ ಎಂದು ಘೋಷ್ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಯುಪಿ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್, ಟಿಎಂಸಿ ಗೂಂಡಾಗಳು ರಾಜ್ಯದಲ್ಲಿ ಕೇಸರಿ ಪಕ್ಷದ ಕಾರ್ಯಕರ್ತರ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಇಂತಹ ಪರಿಸ್ಥಿತಿಗಳಲ್ಲಿಯೂ ಬಂಗಾಳದ ಕಾರ್ಯಕರ್ತರು ದೇಶದ ಹೆಮ್ಮೆ ಮತ್ತು ಬಂಗಾಳದ ಸಾಂಸ್ಕೃತಿಕ ಗೌರವಕ್ಕಾಗಿ ಸಮರ್ಪಕವಾಗಿ ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರೂ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ನೇತೃತ್ವದಲ್ಲಿ ಮುಂದೆ ಸಾಗುತ್ತಿದ್ದಾರೆ ಎಂದು ಸಿಂಗ್ ಹೇಳಿದರು.